

ಚನ್ನಪಟ್ಟಣ: ಮಳೆ, ಚಳಿ, ಗಾಳಿ ಎನ್ನದೆ ದೇಶ ಹಾಗೂ ವಿದೇಶಗಳ ಸಮಗ್ರ ಸುದ್ದಿಗಳನ್ನು ಹೊತ್ತ ಪತ್ರಿಕೆಗಳನ್ನು ನಿತ್ಯವೂ ಮನೆ ಮನೆಗೆ ಪತ್ರಿಕೆ ತಲುಪಿಸುವಲ್ಲಿ ಪತ್ರಿಕಾ ವಿತರಕರ ಪಾತ್ರ ದೊಡ್ಡದಿದೆ. ಈ ನಿಟ್ಟಿನಲ್ಲಿ ವಿತರಕರ ಕ್ಷೇಮಾಭಿವೃದ್ಧಿಗಾಗಿ ಒಕ್ಕೂಟ ರಚಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಶಂಭುಲಿಂಗ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ಪತ್ರಿಕಾ ವಿತರಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಪತ್ರಿಕಾ ವಿತರಕರು ಕಷ್ಟ -ಸುಖ ಏನಿದ್ದರೂ, ಸಂಬಂಧಿಕರು ಮರಣ ಹೊಂದಿದ ಸಂದರ್ಭದಲ್ಲೂ ವೃತ್ತಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ರಾಜ್ಯದ ಸಮಸ್ತ ಪತ್ರಿಕಾ ವಿತರಕರ ಹಿತದೃಷ್ಟಿಯಿಂದ ಅವರಲ್ಲಿ ಆತ್ಮಸ್ಥೆ$ರ್ಯ ತುಂಬುವುದು ಹಾಗೂ ರಚನಾತ್ಮಕವಾಗಿ ಸಂಘಟನೆ ಮಾಡುವ ದಿಕ್ಕಿನಲ್ಲಿ ಒಕ್ಕೂಟ ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಪತ್ರಿಕಾ ವಿತರಕರು ಕಮಿಷನ್ಗಾಗಿ ಸಾಕಷ್ಟು ಹೋರಾಟ ಮಾಡುವುದರ ಜತೆಗೆ, ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಪತ್ರಿಕಾ ವಿತರಕರ ಹಿತ ಕಾಯುವ ಕೆಲಸ ಮಾಡುವುದರೊಂದಿಗೆ ಪತ್ರಿಕಾ ವಿತರಕರನ್ನು ಒಂದೇ ವೇದಿಕೆಗೆ ಕರೆತರುವ ಕೆಲಸವನ್ನು ಒಕ್ಕೂಟ ಮಾಡಲಿದೆ ಎಂದರು.
ಪತ್ರಿಕಾ ವಿತರಕ ಎಂ.ಶಿವಮಾದು ಮಾತನಾಡಿ, ಜಿಲ್ಲೆಯಲ್ಲಿ ಪತ್ರಿಕಾ ವಿತರಕರನ್ನು ಒಂದೇ ಸೂರಿನಡಿ ಒಗ್ಗೂಡಿಸಿ ವಿತರಕರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವ ದಿಕ್ಕಿನಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಸಜ್ಜುಗೊಳಿಸಲು ಎಲ್ಲರೂ ಒಗ್ಗಟ್ಟಾಗಿ ದುಡಿಯುವುದಾಗಿ ತಿಳಿಸಿದರು.
ಒಕ್ಕೂಟದ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸುದೇವ ಮಾತನಾಡಿದರು. ಒಕ್ಕೂಟದ ಪದಾಧಿಕಾರಿ ಶಿವಶಂಕರ್, ಪ್ರಸರಣ ವಿಭಾಗದ ಮುಖ್ಯಸ್ಥ ಮಹೇಶ್, ತಾಲೂಕು ಪತ್ರಿಕಾ ವಿತರಕರಾದ ಮಳೂರುಪಟ್ಟಣ ನಿಂಗಪ್ಪ, ಎಂ.ಎನ್.ಸುರೇಶ್, ಹರೂರು ರಾಜೇಶ್, ಹುಚ್ಚಪ್ಪ, ಗಣೇಶ್, ದರ್ಶನ್, ತಿಟ್ಟಮಾರನಹಳ್ಳಿ ಮಂಜು, ಆಕಾಶ್ ಹಾಗೂ ಜಿಲ್ಲೆಯ ಹಲವಾರು ಪತ್ರಿಕಾ ವಿತರಕರು ಉಪಸ್ಥಿತರಿದ್ದರು. ಇದೇ ವೇಳೆ ಒಕ್ಕೂಟದ ಅಧ್ಯಕ್ಷ ಶಂಭುಲಿಂಗರನ್ನು ರಾಮನಗರ ಜಿಲ್ಲಾ ಪತ್ರಿಕಾ ವಿತರಕರು ಸನ್ಮಾನಿಸಿ ಗೌರವಿಸಿದರು.
ಪ್ರತಿ ಜಿಲ್ಲೆಗೆ ಕೋಟಿ ರೂ. ಅನುದಾನ: ಪ್ರಧಾನ ಕಾರ್ಯದರ್ಶಿ ಸಂಗಮ್ ಸುರೇಶ್ ಮಾತನಾಡಿ, ಕಳೆದ ವರ್ಷ ಸೆಪ್ಟೆಂಬರ್ 4ರಂದು ಪತ್ರಿಕಾ ವಿತರಕರ ದಿನಾಚರಣೆಯಂದು ಒಕ್ಕೂಟ ಸ್ಥಾಪನೆಯಾಗಿದ್ದು, ಕಾರ್ಯಕ್ರಮದಲ್ಲಿ ಸರ್ಕಾರದ ನಾಲ್ವರು ಸಚಿವರು ಭಾಗಿಯಾಗಿದ್ದರು. ಪತ್ರಿಕಾ ವಿತರಕರನ್ನು ಅಸಂಘಟಿತ ವಲಯದಲ್ಲಿ ಸೇರಿಸುವ ವಿಚಾರವನ್ನು ಕಾರ್ಮಿಕ ಸಚಿವರು ಅಂದಿನ ಸಭೆಯಲ್ಲಿ ಘೋಷಣೆ ಮಾಡಿದರು. ಇದರೊಂದಿಗೆ, ವಿತರಕರ ಕ್ಷೇಮಾಭಿವೃದ್ಧಿಗಾಗಿ ಪ್ರತಿ ಜಿಲ್ಲೆಗೆ ಕೋಟಿ ರೂಪಾಯಿ ಅನುದಾನ ನೀಡಬೇಕು ಎಂಬುದು ಒಕ್ಕೂಟದ ಮನವಿಯಾಗಿದ್ದು, ಈ ಕಾರ್ಯ ಅನುಷ್ಠಾನಕ್ಕೆ ಒತ್ತಾಯಿಸಿ ಒಕ್ಕೂಟವು ನಿರಂತರ ಹೋರಾಟ ಮಾಡಲಿದೆ ಎಂದು ತಿಳಿಸಿದರು.