ಪತ್ರಿಕಾ ವಿತರಕರ ಕಾಯಕ ಶ್ಲಾಘನೀಯ

15kglphoto1..
ಕೊಳ್ಳೇಗಾಲ ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಪಟ್ಟಣದ ಪತ್ರಿಕಾ ವಿತರಕರಿಗೆ ಶಾಸಕ ಎನ್.ಮಹೇಶ್ ಜರ್ಕಿನ್ ವಿತರಿಸಿದರು. ಕವಿತಾ, ನಾಸೀರ್ ಷರೀಪ್, ರಾಮಕೃಷ್ಣ, ನಾಮ ಜಿ.ಸೆಲ್ವರಾಜ್ ಇತರರು ಇದ್ದರು.
Published on

ಕೊಳ್ಳೇಗಾಲ: ದೇಶ, ವಿದೇಶದಲ್ಲಿ ನಿತ್ಯ ನಡೆಯುವ ವಿದ್ಯಮಾನಗಳನ್ನು ಪ್ರತಿಕೆಗಳ ಮೂಲಕ ಚಳಿ, ಮಳೆ, ಗಾಳಿ ಎನ್ನದೆ ಮನೆ ಮನೆಗೆ ತಲುಪಿಸುವ ಪತ್ರಿಕಾ ವಿತರಕರ ಕಾಯಕ ಶ್ಲಾಘನೀಯ ಎಂದು ಶಾಸಕ ಎನ್.ಮಹೇಶ್ ಅಭಿಪ್ರಾಯ ತಿಳಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿ ಗೃಹದಲ್ಲಿ ಶನಿವಾರ ಪಟ್ಟಣದ 35 ಪತ್ರಿಕಾ ವಿತರಕರಿಗೆ ಜರ್ಕಿನ್ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಿಹಿ ವಿತರಿಸಿ ಬಳಿಕ ಮಾತನಾಡಿದರು.
ವಾತಾವರಣದ ವೈಪರೀತ್ಯದಿಂದಾಗಿ ಪ್ರಸ್ತುತ ಬೆಳಗಿನ ಜಾವ ಮೈಕೊರೆಯುವ ಚಳಿಯಿದೆ. ಹೀಗಿದ್ದರೂ ತಮ್ಮ ಆರೋಗ್ಯ ಲೆಕ್ಕಿಸದೆ ಹಾಗೂ ಈ ಕಾಯಕದಿಂದ ಕಡಿಮೆ ಹಣ ದುಡಿಮೆ ಇದ್ದರೂ ಪತ್ರಿಕಾ ವಿತರಕರಾಗಿ ಕೆಲಸ ಮಾಡುವುದು ಒಂದು ರೀತಿ ಸೇವೆಯಾಗಿದೆ. ಇವರು ನಿತ್ಯವೂ ಸೈಕಲ್‌ಗಳಲ್ಲಿ ಪತ್ರಿಕೆಗಳನ್ನು ತಲುಪಿಸುವ ಕೆಲಸ ಮಾಡುತ್ತಿದ್ದು, ಓದುಗರಿಗೆ ಎಲ್ಲ ರೀತಿಯ ಸುದ್ದಿ-ಸಮಾಚಾರ ಮುಟ್ಟಿಸುತ್ತಿದ್ದಾರೆ. ಆದ್ದರಿಂದ ಚಳಿ, ಮಳೆಗೆ ಅನುಕೂಲವಾಗುವಂತೆ ಜರ್ಕಿನ್ ವಿತರಣೆ ಮಾಡಲಾಗಿದೆ. ವಿಶೇಷವಾಗಿ ಸಂಕ್ರಾಂತಿ ಹಬ್ಬವಿರುವುದರಿಂದ ಸಿಹಿ ನೀಡಿ ಶುಭಾಶಯ ತಿಳಿಸಿದ್ದೇನೆ ಎಂದು ಹೇಳಿದರು.

ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಹಲವು ಸೌಲಭ್ಯಗಳನ್ನು ಅನುಷ್ಠಾನ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಸಂಘಟಿತ ಕಾರ್ಮಿಕರ ಸುರಕ್ಷಾ ದೃಷ್ಟಿಯಿಂದ ಅಂಚೆ ಇಲಾಖೆಯಲ್ಲಿ ವರ್ಷಕ್ಕೆ 399 ರೂ. ಹಣ ಪಾವತಿಸಿದರೆ ಅಪಘಾತ ಹಾಗೂ ಅನಾರೋಗ್ಯಕ್ಕೆ ತುತ್ತಾದರೆ 10 ಲಕ್ಷ ರೂ.ವರೆಗೂ ವಿಮಾ ಸೌಲಭ್ಯ ಪಡೆಯಬಹುದಾದ ಯೋಜನೆ ತಂದಿದ್ದಾರೆ. ಈ ಯೋಜನೆಯ ಸದುಪಯೋಗವನ್ನು ಪ್ರತಿಯೊಬ್ಬ ಪತ್ರಿಕಾ ವಿತರಕರು ಪಡೆದುಕೊಳ್ಳಬೇಕು. ಅಲ್ಲದೆ ಅಂಚೆ ಕಚೇರಿಯ ವಿಮಾ ಸೌಲಭ್ಯಕ್ಕೆ 35 ಜನರಿಗೂ ನಾನೇ ಮೊದಲನೇ ಕಂತನ್ನು ಕಟ್ಟಿ ನೋಂದಣಿ ಮಾಡಿಸುತ್ತೇನೆಂದು ಭರವಸೆ ನೀಡಿದರು.

ಈ ವೇಳೆ ಕಾರ್ಮಿಕ ನಿರೀಕ್ಷಕ ಚಂದ್ರು ಅವರಿಗೆ ಕರೆ ಮಾಡಿದ ಶಾಸಕರು, ಸಂಘಟಿತರಿಗೆ ಕಾರ್ಮಿಕ ಇಲಾಖೆಯಲ್ಲಿ ಲಭ್ಯವಿರುವ ಇ-ಶ್ರಮ ಯೋಜನೆಯನ್ನು ಪತ್ರಿಕಾ ವಿತರಕರಿಗೆ ನೀಡುವಂತೆ ಸೂಚನೆ ನೀಡಿದರು. ಅಂತೆಯೇ, ಸಹಕಾರ ಇಲಾಖೆಯ ಅಧಿಕಾರಿಗೆ ಕರೆ ಮಾಡಿ ಪತ್ರಿಕಾ ವಿತರಕರ ಸಂಘ ನೋಂದಣಿ ಮಾಡಿಕೊಂಡು ಸರ್ಕಾರದಿಂದ ಬರುವ ಸೌಲಭ್ಯ ಕೊಡಿಸುವಂತೆ ತಿಳಿಸಿದರು.
ನಗರಸಭಾ ಸದಸ್ಯರಾದ ಕವಿತಾ, ನಾಸೀರ್ ಷರೀಫ್, ರಾಮಕೃಷ್ಣ, ನಾಮನಿರ್ದೇಶನ ಸದಸ್ಯರಾದ ಜಿ.ಸೆಲ್ವರಾಜ್, ಸೋಮಣ್ಣ, ನಟರಾಜು, ಮುಖಂಡರಾದ ಜಗದೀಶ್ ಶಂಕನಪುರ, ಜಾಕಿ ಸುರೇಶ್, ಆಗಸ್ಟಿನ್, ಜಕ್ಕಾವುಲ್ಲಾ, ಪ್ರಬುಸ್ವಾಮಿ, ಚಿಕ್ಕಮಾಳಿಗೆ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಮುರಳಿ, ಕಾರ್ಯದರ್ಶಿ ಸುರೇಶ್, ಗೌರವಧ್ಯಕ್ಷ ರಫತ್ತ್ ವುಲ್ಲಾಖಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net