

ಬೀದರ್: ದಕ್ಷಿಣ ಕ್ಷೇತ್ರದ ಕೆಲ ಗ್ರಾಮಗಳಲ್ಲಿ ವಿಪರೀತ ಗಾಳಿ, ಮಳೆಯಿಂದಾಗಿ ಅನಾಹುತ ಸೃಷ್ಟಿಯಾಗಿದೆ. ಬುಧೇರಾ ಗ್ರಾಮದ ಮನೆಯಲ್ಲಿ ಹಾಕಿದ ಜೋಕಾಲಿಯೊಂದಿಗೆ ಪತ್ರಾಗಳು ಹಾರಿದ್ದರಿಂದ ಬಾಲಕಿಯೊಬ್ಬಳು ಗಾಯಗೊಂಡಿದ್ದಾಳೆ.
ಧನರಾಜ ಅವರ ಏಳು ವರ್ಷದ ಮಗುವಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಧನರಾಜ ಮನೆ ಮೇಲೆ ಪತ್ರಾ (ತಗಡಾ)ಗಳಿದ್ದು, ಇದಕ್ಕೆ ಮಗಳಿಗಾಗಿ ಜೋಕಾಲಿ ಹಾಕಿದ್ದರು. ಜೋಕಾಲಿಯಲ್ಲಿ ಆಟವಾಡುತ್ತಿದ್ದಾಗ ಭಾರಿ ಗಾಳಿ ಬೀಸಿದೆ. ಜೋಕಾಲಿಯೊಂದಿಗೆ ಪತ್ರಾ ಹಾರಿ ಬೇರೆಯವರ ಮನೆ ಮೇಲೆ ಬಿದ್ದಿದ್ದು, ಬಾಲಕಿಯ ಕಾಲು, ತಲೆಗೆ ಭಾರಿ ಪೆಟ್ಟು ಬಿದ್ದಿದೆ. ವಿಷಯ ತಿಳಿದ ತಕ್ಷಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಸ್ಥಳಕ್ಕೆ ಆಂಬುಲೆನ್ಸ್ ಕಳಿಸಿ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
ಡಾ.ಬೆಲ್ದಾಳೆ ಬೆಂಗಳೂರಿನಲ್ಲಿದ್ದು, ದೂರವಾಣಿ ಮೂಲಕ ತಹಸೀಲ್ದಾರ್ ದಿಲ್ಶಾದ್ ಮಹತ್ ಅವರನ್ನು ಸಂಪರ್ಕಿಸಿ ಘಟನೆ ನಡೆದಿರುವ ಸ್ಥಳಕ್ಕೆ ಕಳುಹಿಸಿ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಲು ತಿಳಿಸಿದ್ದಾರೆ. ಮಳೆಯಿಂದ ಅವಘಡವಾದ ಹಳ್ಳಿಗಳಿಗೆ ಭೇಟಿ ನೀಡಲು ಸೂಚಿಸಿದ್ದಾರೆ.
ಮುಂಗಾರು ಆರಂಭವಾಗಿದ್ದು, ಗಾಳಿ-ಮಳೆಯಿಂದ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಗ್ರಾಮೀಣ ಜನ ಎಚ್ಚರ ವಹಿಸಬೇಕು. ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಅನಾಹುತ ಸಂಭವಿಸಿದರೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.