

ಬಾಗಲಕೋಟೆ: ಪತ್ರಕರ್ತರು ಪ್ರಜೆಗಳ ಆಪ್ತ ಸಹಾಯಕರಿದ್ದಂತೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯ ಕೊಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪತ್ರಿಕೋದ್ಯಮ ಎನ್ನುವುದು ಜ್ಞಾನದ ಅರಿವನ್ನು ಬಿತ್ತರಿಸುವ ವ್ಯವಸ್ಥೆಯಾಗಿದೆ ಎಂದು ಬಿ.ವಿ.ವಿ ಸಂಘದ ಆಡಳಿತಾಧಿಕಾರಿಗಳಾದ ಡಾ. ವಿ.ಎಸ್.ಕಟಗಿಹಳ್ಳಿಮಠ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಬುಧವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಮಾಧ್ಯಮ ಹಬ್ಬ ಹಾಗೂ ಒಂದು ದಿನದ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
1923ರ ಜುಲೈ 2 ರಂದು ಬಾಗಕೋಟೆಯಲ್ಲಿ ಮೊಟ್ಟಮೊದಲ ಅಖೀಲ ಕರ್ನಾಟಕ ಪತ್ರಿಕಾ ಪರಿಷತ್ತಿನ ಸಮ್ಮೇಳನ ಜರುಗಿತ್ತು, ಮೋರೆ ಹನಮಂತರಾಯರು ಪರಿಷತ್ತಿನ ಅಧ್ಯಕ್ಷರಾಗಿದ್ದರು, ಜಿ.ವಿ.ಗುಂಡಪ್ಪನವರು ಆ ಸಮ್ಮೇಳನ ಉದ್ಘಾಟನೆ ಮಾಡಿ ಪತ್ರಿಕೆಯೆಂಬುದು ಪವಿತ್ರವಾದದ್ದು ಆದರೆ ಅದಕ್ಕಿಂತ ದೊಡ್ಡದಾಗಿದ್ದು ದೇಶ ಹಾಗೂ ಪ್ರಜಾ ಸಮುದಾಯವಾಗಿದೆ, ಪತ್ರಕರ್ತರು ಪ್ರಜೆಯ ಆಪ್ತಸಹಾಯಕರಂತೆ ಸಾರ್ವಜನಿಕವಾಗಿ ಕೆಲಸ ನಿರ್ವಹಿಸಬೇಕೆಂದು ಹೇಳಿದ ಮಾತು ಇಂದಿಗೂ ಪ್ರಸ್ತುತವಾಗಿದೆ.
ಇಡಿ ಕರ್ನಾಟಕಕ್ಕೆ ಪತ್ರಿಕೋದ್ಯಮ ಎಂದರೆ ಏನು ಎಂದು ಕಲಿಸಿದವರು ಬಾಗಕೋಟೆಯವರು ಎಂಬುದು ಸತ್ಯ, ಆ ಕಾಲದಲ್ಲಿ ಸಮಾಜಮುಖಿಯಾಗಿ ಯಾವ ರೀತಿ ಕೆಲಸ ಮಾಡಬೇಕೆಂದು ತೋರಿಸಿದವರು, ಎಂ.ಪಿ.ಜೊಷಿ, ನಾಯಕರು, ಪುರೊಹಿತ, ಬಿಂದುಮಾಧವ ಕುಲಕರ್ಣಿ ಜೊತೆಗೆ ಬಾಗಲಕೋಟೆಯವರಾದ ಮೋರೆ ಹನಮಂತರಾಯರ ಪಾತ್ರ ದೊಡ್ಡದು, ಪತ್ರಿಕೋದ್ಯಮ ಕಲೆಯುವುದು ಸರಳವಾದರೆ ಅದರ ನೀತಿ ಸಂಹಿತೆಯನ್ನು ಮುಂದುವರಿಸಿಕೊಂಡು ಹೋಗುವುದು ಕ್ಲಿಷ್ಟಕರ ಸಂಗತಿ ಪತ್ರಿಕೋದ್ಯಮ ಉದ್ಯಮವಾಗಿ ಬೆಳೆದ ಮೇಲೆ ಪತ್ರಿಕಾ ವೃತ್ತಿಯಲ್ಲಿ ಅಮೂಲಾಗ್ರ ಬದಲಾವಣೆಯಾಗಿದೆ. ಸಾಮಾಜಿಕ ಕಳಕಳಿ, ರಾಷ್ಟ್ರ ಅಭಿಮಾನ ಮೂಡಿಸುವಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾಗಿದೆ. ಈ ರಂಗಕ್ಕೆ ಪ್ರವೇಶ ಮಾಡುವ ಮೊದಲು ಅದರ ಆಳವಾದ ಅಧ್ಯಯನ ಬಹಳ ಮುಖ್ಯ ಎಂದರು. ತಿಳಿದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ವರದಿಗಾರರಾದ ವಿನಾಯಕ ಮಠಪತಿ ಅವರು ಮಾತನಾಡಿ. ಪತ್ರಿಕೋದ್ಯಮದಲ್ಲಿರುವ ಸವಾಲುಗಳನ್ನು ತಿಳಿದುಕೊಂಡು ಹೆಜ್ಜೆಹಾಕುವುದನ್ನು ರೂಡಿಸಿಕೊಳ್ಳಬೇಕು. ವೃತ್ತಿಮೌಲ್ಯ ಕಾಪಾಡುವಲ್ಲಿ ಭಾವಿ ಪತ್ರಕರ್ತರ ಪಾತ್ರ ಅಪಾರವಾಗಿದೆ. ಬರೆದ ವರದಿಗಳಿಗೆ ತಕ್ಕ ಪ್ರತಿಫಲ ಸಿಕ್ಕಾಗ ಅದಕ್ಕೆ ಒಂದು ತೂಕ. ಪತ್ರಿಕೋದ್ಯಮದಲ್ಲಿ ಉತ್ತರ ಕರ್ನಾಟಕದವರ ಕೊಡುಗೆ ಅಪಾರ. ಪತ್ರಕರ್ತರು ಪ್ರಶ್ನೆ ಮಾಡುವ ಹಕ್ಕನ್ನು ಗಳಿಸಿಕೊಳ್ಳಬೇಕು. ಗ್ರಾಮೀಣ ಮಕ್ಕಳು ಪತ್ರಕರ್ತರಾಗಬೇಕು ಎಂಬ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಸದುದ್ದೇಶದಿಂದ ಪ್ರಾರಂಭವಾದ ಪತ್ರಿಕೋಧ್ಯಮ ಹಾಗೂ ಸಮೂಹ ಸಂವಹನ ವಿಭಾಗ ಕಳೆದ 7 ವರ್ಷದಿಂದ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಸ್ಥಾನ ವಹಿಸಿದ್ದ ಪ್ರಾಚಾರ್ಯರಾದ ಎಸ್.ಆರ್.ಮೂಗನೂರಮಠ ಅವರು ಮಾತನಾಡಿ. ಪತ್ರಿಕೋದ್ಯಮ ಹೂವಿನ ಹಾಸಿಗೆಯಲ್ಲ. ವಿಶ್ವಾಸರ್ಹತೆ, ಬದ್ಧತೆಯನ್ನು ರೂಢಿಸಿಕೊಳ್ಳಿ, ಓದುಗರ ಅಪೇಕ್ಷೆಯ ಮೇಲೆ ಬರಹ ಇರಬೇಕು ಪತ್ರಕರ್ತರು ಸಮಾಜದ ಕನ್ನಡಿಯಿದ್ದಂತೆ ಎಂದರು.
ಮಾಧ್ಯಮ ಹಬ್ಬದ ಪ್ರಯುಕ್ತ ಮಹಾವಿದ್ಯಾಲಯದ ವಿಧ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಐ.ಬಿ.ಚಿಕ್ಕಮಠ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾಧ್ಯಾಪಕರಾದ ಎಂ.ಪಿ.ದೊಡವಾಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.