ಪತ್ರಕರ್ತರು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಿ

IMG_20221016_125636
ಆಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಮಾಧ್ಯಮ ದಿನಾಚರಣೆ ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್, ಮಾಜಿ ಅಧ್ಯಕ್ಷರಾದ ತೊ.ಚ.ಅನಂತಸುಬ್ಬರಾಯ, ರವಿ ನಾಕಲಗೂಡು, ಕೆ.ಶೇಷಾದ್ರಿ, ಮುಂಜಾವು ಕೃಷ್ಣಮೂರ್ತಿ, ಕೆ.ಆರ್.ಮಂಜುನಾಥ್, ಬಿ.ಆರ್.ಉದಯಕುಮಾರ್, ಎಸ್.ಆರ್.ಪ್ರಸನ್ನಕುಮಾರ್ ಅವರನ್ನು ಗೌರವಿಸಲಾಯಿತು.
Published on

ಆಲೂರು: ಜನರು ಮಾಧ್ಯಮ, ಪತ್ರಕರ್ತರನ್ನು ಗಮನಿಸುತ್ತಿರುತ್ತಾರೆ. ಸಮಾಜದಲ್ಲಿ ಪತ್ರಕರ್ತರ ಮೇಲೆ ದೊಡ್ಡ ಜವಾಬ್ದಾರಿಯಿದೆ. ಹಾಗಾಗಿ ಪತ್ರಕರ್ತರು ಜನರು ನಿಮ್ಮ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ಡಿ.ಕಾಂತರಾಜ್ ಸಲಹೆ ನೀಡಿದರು.

ತಾಲೂಕಿನ ವಾಟೆಹೊಳೆ ಜಲಾಶಯ ಹಿನ್ನೀರು ಸಮೀಪವಿರುವ ವಾಟರ್ ವ್ಯೆ ರೆಸಾರ್ಟ್ ಆವರಣದಲ್ಲಿ, ತಾಲೂಕು ಕಾರ್ಯನಿರ್ತರ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮಾಧ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳ ಪಾತ್ರ ಬಹಳ ಮಹತ್ತರವಾದುದು. ಪತ್ರಕರ್ತರು ಅಧಿಕಾರಿಶಾಹಿಯ ತಪ್ಪುಗಳನ್ನು ತಿದ್ದುವ ಕೆಲಸ ಮಾಡಬೇಕು, ಮಾಧ್ಯಮಗಳನ್ನು ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯುತ್ತಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು. ಸತ್ಯಕ್ಕೆ ಚ್ಯುತಿ ಬಾರದಂತೆ ನೈಜ ಸುದ್ದಿಗಳನ್ನು ಪ್ರಕಟಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಗಳು ಪ್ರಸರಣವಾಗುತ್ತಿವೆ. ಜನರು ಸತ್ಯಕ್ಕಾಗಿ ಮಾಧ್ಯಮಗಳನ್ನು ಅವಲಂಬಿಸಿದ್ದಾರೆ. ಹಾಗಾಗಿ ಪತ್ರಕರ್ತರು ತಮ್ಮನ್ನು ತಾವೇ ವಿಮರ್ಶೆಗೆ ಒಡ್ಡಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದರು.

ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಸ್ವಾತಂತ್ರೃ ಚಳವಳಿಯನ್ನು ಮುನ್ನಡೆಸಲು ಪತ್ರಿಕೆಗಳು ಸಹಕಾರಿಯಾಗಿದ್ದವು. ದೇಹದ ರೋಗಕ್ಕೆ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಿದಂತೆ, ಸಮಾಜದ ಕಾಯಿಲೆಗೆ ಪತ್ರಕರ್ತ ಚಿಕಿತ್ಸಕನಾಗಿ ಕೆಲಸ ಮಾಡಬೇಕಿದೆ. ಪತ್ರಕರ್ತರು ನಡೆ, ನುಡಿಯಲ್ಲಿ ಶುದ್ಧವಾಗಿರಬೇಕು. ಈ ದೇಶದ ಮಹಾನ್ ನಾಯಕರಾದ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಪತ್ರಕರ್ತರಾಗಿದ್ದರು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಚಿಕತ್ಸೆ ಕೊಡುವಂತಹ ಕೆಲಸ ಪತ್ರಕರ್ತರಿಂದ ಆಗಬೇಕು, ತಾಲೂಕು ಕೇಂದ್ರದಲ್ಲಿ ಪತ್ರಕರ್ತರ ಭವನ ನಿರ್ಮಾಣ ಹಾಗೂ ಆಶ್ರಯ ನಿವೇಶನ ಹಂಚಿಕೆ ಮಾಡುವ ಸಂದರ್ಭದಲ್ಲಿ ಪತ್ರಕರ್ತರಿಗೆ ನಿವೇಶನ ಮೀಸಲಿಡಲಾಗುವುದು, ಮುಂಬರುವ ವಿದಾನಸಭೆ ಅಧಿವೇಶನದಲ್ಲಿ ಪತ್ರಕರ್ತರಿಗೆ ಬಸ್‌ಪಾಸ್ ವಿತರಣೆ ಮಾಡಲು ಸರ್ಕಾರದ ಮೇಲೆ ಒತ್ತಡ ತರುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ತಾಲೂಕಿನ ಹಲವು ಸಂಘ-ಸಂಸ್ಥೆಗಳ ಮುಖಂಡರನ್ನು ಹಾಗೂ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್, ಮಾಜಿ ಅಧ್ಯಕ್ಷರಾದ ತೊ.ಚ. ಅನಂತಸುಬ್ಬರಾಯ, ರವಿ ನಾಕಲಗೂಡು, ಕೆ.ಶೇಷಾದ್ರಿ, ಮುಂಜಾವು ಕೃಷ್ಣಮೂರ್ತಿ, ಕೆ.ಆರ್.ಮಂಜುನಾಥ್, ಬಿ.ಆರ್. ಉದಯಕುಮಾರ್, ಎಸ್.ಆರ್.ಪ್ರಸನ್ನಕುಮಾರ್ ಅವರನ್ನು ಗೌರವಿಸಲಾಯಿತು.

ತಾಲೂಕು ಕಾರ್ಯನಿರ್ತರ ಪತ್ರಕರ್ತರ ಸಂಘದ ಅಧ್ಯಕ್ಷ ನಟರಾಜ್ ನಾಕಲಗೂಡು, ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್. ಮಂಜೇಗೌಡ, ಬಿಜೆಪಿ ಅಧ್ಯಕ್ಷ ನಾಗರಾಜ ಹುಲ್ಲಹಳ್ಳಿ, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಬಾಳ್ಳು ಗೋಪಾಲ್, ಉಪಾಧ್ಯಕ್ಷ ವೇಣುಗೋಪಾಲ್, ರಾಷ್ಟ್ರೀಯ ಕಾರ್ಯಕಾರಣಿ ಮಂಡಳಿಯ ಸದಸ್ಯ ಜಿ. ಪ್ರಕಾಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಸಿಡಿಪಿಒ ಎ.ಟಿ.ಮಲ್ಲೇಶ್, ಬಿಇಒ ರುದ್ರೇಶ್, ಪಪಂ ಮುಖ್ಯಾಧಿಕಾರಿ ನಟರಾಜ್, ರೆಸಾರ್ಟ್ ಮಾಲೀಕ ಕೆ.ಜಿ. ಗೋಪಿ, ಸ್ಥಳೀಯ ಸಂಘ-ಸಂಸ್ಥೆಗಳ ಅಧ್ಯಕ್ಷರು, ಪ್ರತಿನಿಧಿಗಳು ಭಾಗವಹಿಸಿದ್ದರು.

ಇದೆ ಸಂದರ್ಭದಲ್ಲಿ ಪತ್ರಕರ್ತರ ಕುಟುಂಬದವರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕ್ರಿಕೆಟ್ ಆಟದಲ್ಲಿ ಪ್ರಥಮ ಸ್ಥಾನ ಪಡೆದ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ದ್ವಿತೀಯ ಸ್ಥಾನ ಪಡೆದ ಕಂದಾಯ ಇಲಾಖೆ ಕ್ರೀಡಾಪಟುಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net