ಪತ್ರಕರ್ತರು ಸತ್ಯದ ಕಡೆಗೆ ಬೆಳಕು ಚೆಲ್ಲಲಿ

28 mlv 1
Published on

ಮಳವಳ್ಳಿ: ತಂತ್ರಜ್ಞಾನ ಯುಗದಲ್ಲಿ ಪತ್ರಕರ್ತರು ಸತ್ಯದ ಕಡೆಗೆ ಬೆಳಕು ಚೆಲ್ಲಬೇಕೆಂದು ರಾಜ್ಯ ಶಾಸಕ ಪಿ.ಎಂ. ನರೇಂದ್ರಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಸುದ್ದಿಗಳ ಸತ್ಯ, ಸುಳ್ಳುಗಳ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವ ಅನಿವಾರ್ಯವಾಗಿದೆ. ಸಂವಿಧಾನದ ನಾಲ್ಕನೇ ಅಂಗವಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು ಸತ್ಯ ಸಂಶೋಧನೆ ಮೂಲಕ ನಿಖರತೆ ಮಾಹಿತಿಗಳನ್ನು ನೀಡಬೇಕೆಂದು ಹೇಳಿದರು.

ಪತ್ರಕರ್ತರು ವಸ್ತುನಿಷ್ಠೆ ಜತೆಗೆ ಸಾಮಾಜಿಕ ಹಾಗೂ ವಿಷಯಾಧಾರಿತವಾಗಿ ತನಿಖಾ ವರದಿಗಳನ್ನು ನೀಡುವುದರ ಜತೆಗೆ ಸಮಾಜದ ಒಳಿತಿಗಾಗಿ ದುಡಿಯುವ ಮಾಧ್ಯಮ ಸಿಬ್ಬಂದಿ ಆರೋಗ್ಯದ ಕಡೆಗೂ ಗಮನಹರಿಸಬೇಕೆಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತಿಕೆರೆ ಜಯರಾಮು ಮಾತನಾಡಿ, ಪತ್ರಕರ್ತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸಂಘ ನಿರಂತರವಾಗಿ ಶ್ರಮಿಸುತ್ತಿದ್ದು, ಸರ್ಕಾರಗಳು ಕೂಡ ಸಂಘದ ಮನವಿಗೆ ಸ್ಪಂದಿಸಿ ಹಲವು ಕೊಡುಗೆಗಳನ್ನು ನೀಡಿದೆ ಎಂದರು.

ರಾಜ್ಯದಲ್ಲಿಯೇ ತಾಲೂಕು ಸಂಘಗಳಿಗೆ ಸ್ವಂತ ನಿವೇಶನ ಇರುವುದು ಬೆರಳೆಣಿಕೆಯಷ್ಟು ಮಾತ್ರ, ಆ ಪೈಕಿ ಮಳವಳ್ಳಿಯೂ ಸೇರಿರುವುದು ಖುಷಿಯ ವಿಚಾರವಾಗಿದೆ. ನಿವೇಶನದ ಸಂಬಂಧ ಇರುವ ದಾಖಲೆ ಸಮಸ್ಯೆಗಳನ್ನು ಬಗೆಹರಿಸಿ ಬದಲಿ ನಿವೇಶನ ನೀಡುವಲ್ಲಿ ಶಾಸಕರು ಶ್ರಮವಹಿಸಿದ್ದು, ಅವರಿಗೆ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇವೆ ಎಂದರು.

ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮತ್ತು ಪತ್ರಿಕಾ ವಿತರಕರಿಗೆ ಅಭಿನಂದಿಸಿ, ಗೌರವಿಸಲಾಯಿತು.

ತಹಸೀಲ್ದಾರ್ ಡಾ.ವಿ.ಎಸ್.ಲೋಕೇಶ್, ಮನ್‌ಮುಲ್‌ನಿರ್ದೇಶಕ ಡಿ.ಕೃಷ್ಣೇಗೌಡ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು, ಜಿಲ್ಲಾಧ್ಯಕ್ಷ ನವೀನ್‌ಕುಮಾರ್, ರಾಜ್ಯ ಸಮಿತಿ ಸದಸ್ಯ ಸಿ.ಎನ್. ಮಂಜುನಾಥ್, ರಾಷ್ಟ್ರೀಯ ಸಮಿತಿ ಸದಸ್ಯ ಜೆ.ಎಂ. ಬಾಲಕೃಷ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆನಂದ್, ಬಿ.ಪಿ. ಪ್ರಕಾಶ್, ತಾಲೂಕು ಸಂಘದ ಅಧ್ಯಕ್ಷ , ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net