

ಚಿಟಗುಪ್ಪ: ಸಮಾಜದಲ್ಲಿ ನಡೆಯುವ ಪ್ರತಿದಿನದ ವಿದ್ಯಮಾನಗಳನ್ನು ಜಗತ್ತಿಗೆ ತಿಳಿಸುವ ಕಾರ್ಯದಲ್ಲಿ ತೊಡಗಿರುವ ಪತ್ರಕರ್ತರು ಸದಾ ಒತ್ತಡದ ಮಧ್ಯೆ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಣಪತಿ ಹೇಳಿದರು.
ಪಟ್ಟಣದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕನ್ನಡ ಸೇನೆ ಶನಿವಾರ ಆಯೋಜಿಸಿದ್ದ ಪತ್ರಕರ್ತ ಗೌತಮ್ ಹೀರಾ ಅವರ ನುಡಿನಮನ ಕಾರ್ಯಕ್ರಮದಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ತೀರಾ ಬಡತನದಲ್ಲಿರುವ ಗೌತಮ ಕುಟುಂಬಕ್ಕೆ ರಾಜ್ಯ ಸಂಘದಿAದ ಹಾಗೂ ಬೀದರ್ ಜಿಲ್ಲಾ ಸಂಘದಿಂದ ಆರ್ಥಿಕ ಸಹಾಯ ಕಲ್ಪಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ, ಕನ್ನಡಸೇನೆ ಸಂಚಾಲಕ ರವಿಸ್ವಾಮಿ ನಿರ್ಣಾ ಮಾತನಾಡಿದರು. ಉದ್ಯಮಿ ಮಲ್ಲಿಕಾರ್ಜುನ ಪಾಟೀಲ್, ನವೀನ್ ಗಂಜಿ, ಸಂಗಮೇಶ ಜವಾದಿ, ಮುಸ್ತಫಾ ಖಾದ್ರಿ, ಪವನ ಪೂಜಾರಿ, ಸತೀಶ ಗಂಜಿ ಇತರರಿದ್ದರು.