

ಚಿತ್ರದುರ್ಗ: ಪತ್ರಕರ್ತರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿ, 27.5 ಲಕ್ಷ ರೂ. ವೆಚ್ಚದಲ್ಲಿ ನೂತನ ವಾಹನಕ್ಕೆ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲೇ ವಾರ್ತಾ ಇಲಾಖೆಗೆ ಹಸ್ತಾಂತರವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕದಿಂದ ಹೈಟೆಕ್ ಮಾದರಿಯಲ್ಲಿ ನವೀಕರಿಸಲಾದ ಚಿತ್ರದುರ್ಗ ಪತ್ರಿಕಾ ಸಭಾಭವನ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 3 ದಶಕಗಳಿಂದ ರಾಜಕೀಯದಲ್ಲಿದ್ದೇನೆ. ಜನಪ್ರತಿನಿಧಿಗಳು, ಪತ್ರಕರ್ತರಿಗೆ ಸಂಘರ್ಷವಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಗಮನ ಸೆಳೆಯುವಲ್ಲೂ ಮುಂಚೂಣಿಯಲ್ಲಿದ್ದಾರೆ ಎಂದರು.
ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಮಾತನಾಡಿ, ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರದಿಂದ ಪತ್ರಕರ್ತರ ಸಂಘಕ್ಕೆ 50ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ನವೀಕೃತಗೊಂಡಿರುವುದು ಉತ್ತಮ ಬೆಳವಣಿಗೆ. ಪತ್ರಕರ್ತರಿಗೆ ನಿವೇಶನ ಮಂಜೂರು ಮಾಡಲು ತೊಡಕುಗಳಿದ್ದರೆ ಬಗೆಹರಿಸಿ, ಕಾನೂನಾತ್ಮಕವಾಗಿ ನೀಡಲು ಸಚಿವರು, ಡಿಸಿ, ಎಡಿಸಿ ಕ್ರಮವಹಿಸಲಿ ಎಂದು ಒತ್ತಾಯಿಸಿದರು.
ಭವನಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿಟ್ಟಿರುವುದು ಸ್ವಾಗತಾರ್ಹ. ಸ್ವತಃ ಪತ್ರಕರ್ತರೂ ಆಗಿದ್ದ ಅವರು 1920ರಲ್ಲಿ ಮೂಕನಾಯಕ, 1927ರಲ್ಲಿ ಬಹಿಷ್ಕೃತ ಭಾರತ, 1928ರಲ್ಲಿ ಸಮತಾ, 1930ರಲ್ಲಿ ಜನತಾ, 1956 ಪ್ರಬುದ್ಧ ಭಾರತ ಹೀಗೆ ಸಾಮಾಜಿಕ ಆಂದೋಲನದ ಬಲವರ್ಧನೆಗಾಗಿ ಹೊರತಂದ ಐದು ಪತ್ರಿಕೆಗಳಾಗಿವೆ. ಸಮಾಜ ಮುನ್ನಡೆಸುವಲ್ಲಿ ಪತ್ರಕರ್ತರ ಪಾತ್ರ ದೊಡ್ಡದಿದೆ ಎಂದರು.
ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಮಾತನಾಡಿ, ಸಂಘದವರ ಒತ್ತಾಯದ ಮೇರೆಗೆ ಸಚಿವರ ಗಮನ ಸೆಳೆದು, ಜಿಲ್ಲಾ ಖನಿಜ ಪ್ರತಿಷ್ಠಾನದಿಂದ 25ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಿ ಭವನ ನವೀಕರಿಸಲಾಗಿದೆ. ಪಿವಿಎಸ್ ಥಿಯೇಟರ್ ಮಾದರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಅಕಾಸ್ಟಿಕ್ ಆಡಿಯೋ ಥಿಯೇಟರ್‌ನಂತೆ ಅತ್ಯದ್ಭುತವಾಗಿ ನಿರ್ಮಾಣವಾಗಿದೆ ಎಂದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮಾತನಾಡಿ, ಸಂಘ ಸಲ್ಲಿಸಿದ ಮನವಿಗೆ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು ಪತ್ರಿಕಾ ದಿನಾಚರಣೆಯಂದು ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮೆಗೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ ಎಂದರು.
ಸಂಘದ ರಾಜ್ಯ ಖಜಾಂಚಿ ವಾಸುದೇವ ಹೊಳ್ಳ ಮಾತನಾಡಿ, ರಾಜ್ಯ ಸಂಘದಲ್ಲಿ 1 ಕೋಟಿ ರೂ. ಠೇವಣಿ ಇದೆ. ತಾಂತ್ರಿಕವಾಗಿ ಕೋಲಾರಕ್ಕಿಂತ ಅತ್ಯದ್ಭುತವಾಗಿ ಚಿತ್ರದುರ್ಗ ಜಿಲ್ಲಾ ಸಂಘದ ಭವನ ನವೀಕೃತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಗೌಡಗೆರೆ ಮಾತನಾಡಿ, ಈ ಹಿಂದೆ ಚಿತ್ರದುರ್ಗ ಶಾಸಕರಾಗಿದ್ದ ಜಿ.ಎಚ್.ತಿಪ್ಪಾರೆಡ್ಡಿ 5 ಲಕ್ಷ ರೂ., ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಖನಿಜ ಪ್ರತಿಷ್ಠಾನದಿಂದ 25 ಲಕ್ಷ ರೂ., ಎಂಎಲ್ಸಿ ಕೆ.ಎಸ್.ನವೀನ್ 10 ಲಕ್ಷ ರೂ., ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ 10ಲಕ್ಷ ರೂ. ಅನುದಾನ ನೀಡಿದ್ದರಿಂದಾಗಿ ಹವಾನಿಯಂತ್ರಿತ ಸಭಾಭವನ ಸೇರಿ ಇನ್ನಿತರೆ ಅಭಿವೃದ್ಧಿ ಕೈಗೊಳ್ಳಲಾಗಿದೆ. ಇದಕ್ಕೆ, ಎಲ್ಲ ಪತ್ರಕರ್ತರ ಸಹಕಾರವಿದೆ ಎಂದು ತಿಳಿಸಿದರು.
ಇದೇ ವೇಳೆ ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್.ಅಹೋಬಳಪತಿ ಅವರನ್ನು ಸನ್ಮಾನಿಸಲಾಯಿತು. ಎಡಿಸಿ ಬಿ.ಟಿ.ಕುಮಾರಸ್ವಾಮಿ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಂ ರಾವ್, ಡಿವೈಎಸ್ಪಿ ದಿನಕರ್, ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಕೂಡಾ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಶಿವಣ್ಣ ಇತರರಿದ್ದರು. ಸಂಘದ ಜಿಲ್ಲಾ ಖಜಾಂಚಿ ಡಿ. ಕುಮಾರಸ್ವಾಮಿ ಸ್ವಾಗತಿಸಿದರು. ಕಾರ್ಯದರ್ಶಿ ವಿನಾಯಕ ಬಿ.ಎಸ್. ತೊಡರನಾಳ್ ನಿರೂಪಿಸಿದರು. ರವಿ ಉಗ್ರಾಣ, ವಿ. ವೀರೇಶ್ ವಂದಿಸಿದರು.