ಪತ್ರಕರ್ತರ ಸಮ್ಮೇಳನದ ಲಾಂಛನ ಬಿಡುಗಡೆ, ಮಾಧ್ಯಮದ ಏಳಿಗೆಗೆ ನಾಂದಿಯಾಗಲಿ ಸಮ್ಮೇಳನ  -ಶಾಸಕ ಶಾಮನೂರು ಶಿವಶಂಕರಪ್ಪ

dvg-lanchana-nov-17.jpg
Published on
ದಾವಣಗೆರೆ: ಬರುವ ವರ್ಷ ಜನವರಿಯಲ್ಲಿ ನಿಯೋಜಿತ ಪತ್ರಕರ್ತರ 38ನೇ ರಾಜ್ಯ ಸಮ್ಮೇಳನವು ಎಲ್ಲ ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಪೂರಕವಾಗಿ ನಡೆಯಲಿ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಆಶಿಸಿದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರ ‘ಶಿವ-ಪಾರ್ವತಿ’ ನಿವಾಸದ ಗೃಹ ಕಚೇರಿಯಲ್ಲಿ ಶುಕ್ರವಾರ ಸಂಜೆ ಪತ್ರಕರ್ತರ ಸಮ್ಮೇಳನದ ಲಾಂಛನ ಅನಾವರಣಗೊಳಿಸಿ ಮಾತನಾಡಿದರು. ರಾಜ್ಯ ಪತ್ರಕರ್ತರ ಸಮ್ಮೇಳನದ ಮಹಾ ಪೋಷಕರೂ ಆಗಿರುವ ಎಸ್ಸೆಸ್, ಪತ್ರಕರ್ತರ ಹಲವಾರು ಬೇಡಿಕೆಗಳ ಈಡೇರಿಕೆ ಕುರಿತಂತೆ ಸಮ್ಮೇಳನದಲ್ಲಿ ನಿರ್ಣಯಗಳನ್ನು ಕೈಗೊಂಡು ಸರ್ಕಾರದ ಮುಂದಿಟ್ಟು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾಧ್ಯಮದವರು ಒಗ್ಗಟ್ಟು ಪ್ರದರ್ಶಿಸಬೇಕು ಎಂದೂ ಹೇಳಿದರು. 31 ವರ್ಷಗಳ ಹಿಂದೆ, ನಗರದ ಧರ್ಮಪ್ರಕಾಶ ರಾಜನಹಳ್ಳಿ ಹನುಮಂತಪ್ಪ ಧರ್ಮಶಾಲೆಯಲ್ಲಿ ಆಯೋಜಿಸಿದ್ದ ರಾಜ್ಯ ಪತ್ರಕರ್ತರ ಸಮ್ಮೇಳನದ ಸ್ವಾಗತ ಸಮಿತಿಗೆ ಅಧ್ಯಕ್ಷರಾಗಿ ಯಶಸ್ವಿಗೊಳಿಸಿದ್ದನ್ನು ಮೆಲುಕು ಹಾಕಿದರು. ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್ ಮಾತನಾಡಿ, ಸಮ್ಮೇಳನದ ಕುರಿತಂತೆ ಮಾಹಿತಿ ನೀಡಿದರು. ಈ ಬಾರಿ 6 ಸಾವಿರಕ್ಕೂ ಹೆಚ್ಚು ಪತ್ರಿಕಾ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ ಹೇಳಿದರು. ಪತ್ರಕರ್ತರ ಸಮಸ್ಯೆಗಳು ಮತ್ತು ಪತ್ರಿಕೋದ್ಯಮದ ಮುಂದಿರುವ ಸವಾಲುಗಳ ಕುರಿತಂತೆ ಸಮ್ಮೇಳನದಲ್ಲಿ ಅನೇಕ ಗೋಷ್ಠಿ ಆಯೋಜಿಸಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ತಿಳಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಸಂಘದ ರಾಜ್ಯ ಸಮಿತಿ ಸದಸ್ಯ ಕೆ. ಚಂದ್ರಣ್ಣ, ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಕೆ. ಒಡೆಯರ್, ಎ. ಫಕೃದ್ಧೀನ್, ಎನ್.ವಿ.ಬದರೀನಾಥ್ ಇತರರಿದ್ದರು. --
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net