

ಜಗಳೂರು: ದಾವಣಗೆರೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ 38ನೇ ಪತ್ರಕರ್ತರ ಸಮ್ಮೇಳನ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಂಘದ ಎಲ್ಲ ಸದಸ್ಯರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ ಲೋಕೇಶ್ ಕರೆ ನೀಡಿದರು.
ಇಲ್ಲಿನ ಪ್ರತಿಕಾ ಭವನದಲ್ಲಿ ಭಾನುವಾರ ಸಮ್ಮೇಳನದ ಪೂರ್ವಸಿದ್ಧತೆ ಕುರಿತು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಸಮ್ಮೇಳನವನ್ನು ಯಾರೂ ಲಘುವಾಗಿ ಭಾವಿಸಬಾರದು, ಸಂಘದ ಪ್ರತಿಯೊಬ್ಬ ಸದಸ್ಯರು ಸಮ್ಮೇಳನದ ಭಾಗವಾಗಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಸಮ್ಮೇಳನಕ್ಕೆ ದಾವಣಗೆರೆ ಜಿಲ್ಲೆಯಿಂದ ಮಾತ್ರವಲ್ಲದೆ, ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಪತ್ರಕರ್ತರು ಆಗಮಿಸಲಿದ್ದಾರೆ. ಹೀಗಾಗಿ ದಾವಣಗೆರೆ ಜಿಲ್ಲೆ ಪ್ರತಿ ತಾಲೂಕಿನ ಪತ್ರಕರ್ತರ ಮೇಲೆ ದೊಡ್ಡ ಜವಾಬ್ದಾರಿ ಇದೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಇ.ಎಂ ಮಂಜುನಾಥ್ ಮಾತನಾಡಿ, ದಾವಣಗೆರೆ ಜಿಲ್ಲೆಯಾಗಿ 25 ವರ್ಷ ಪೂರೈಸಿದ್ದು, ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಪತ್ರಕರ್ತರ ರಾಜ್ಯ ಸಮ್ಮೇಳನವನ್ನು ನಡೆಸಲಾಗುತ್ತಿದ್ದು, ಪತ್ರಕರ್ತರ ಸೌಭಾಗ್ಯ ಎಂದರು.
ದಾವಣಗೆರೆ ಮಧ್ಯ ಕರ್ನಾಟಕವಾಗಿರುವುದರಿಂದ ಸಮ್ಮೇಳನಕ್ಕೆ ಸುಮಾರು 5 ಸಾವಿರಕ್ಕೂ ಹೆಚ್ಚು ಪತ್ರಕರ್ತರು, ಕುಟುಂಬದ ಸದಸ್ಯರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಇದನ್ನು ನಿಭಾಯಿಸುವುದು ಸುಲಭವಲ್ಲ. ಎಲ್ಲಾ ತಾಲೂಕು ಪತ್ರಕರ್ತರ ಸಹಕಾರ ತುಂಬ ಮುಖ್ಯವಾಗಿದೆ. ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಕ.ಕಾ.ನಿ. ಪರ್ತಕರ್ತರ ಸಂಘದ ತಾಲೂಕಾಧ್ಯಕ್ಷ ಜಿ.ಎಸ್ ಚಿದಾನಂದ, ರಾಷ್ಟ್ರೀಯ ಒಕ್ಕೂಟ ಪತ್ರಿಕಾ ಮಂಡಳಿ ಸಮಿತಿ ಸದಸ್ಯ ಎನ್.ಒಡೆಯರ್, ರಾಜ್ಯ ಸಮಿತಿ ಸದಸ್ಯ ದೇವರಾಜ್, ಜಿಲ್ಲಾ ಉಪಾಧ್ಯಕ್ಷ ಡಿ. ಶ್ರೀನಿವಾಸ್, ಕಾರ್ಯದರ್ಶಿ ವೀರೇಶ್, ಖಜಾಂಚಿ ಭದ್ರಿನಾಥ್, ನಿರ್ದೇಶಕ ವೇದಮೂರ್ತಿ, ಬಿ.ಪಿ ಸುಭಾನ್, ಜಿಲ್ಲಾ ಹಿರಿಯ ಪತ್ರಕರ್ತ ಅಣಬೂರ್ ಕೊಟ್ರೇಶ್, ತಾಲೂಕು ಪ್ರಧಾನ ಕಾರ್ಯದರ್ಶಿ ಲೋಕೇಶ್.ಎಂ ಐಹೊಳೆ ಸೇರಿದಂತೆ ಮತ್ತಿತರರು ಇದ್ದರು.