

ಹಾಸನ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ವೀರಯೋಧ ದಿ.ಪ್ರಾಂಜಲ್ ಗೌರವಾರ್ಥ ಮಂಗಳೂರಿನ ಸಹ್ಯಾದ್ರಿ ಕ್ರಿಕೆಟ್ ಮೈದಾನದಲ್ಲಿ ನಡೆದ ರಾಜ್ಯ ಮಟ್ಟದ ಬ್ರ್ಯಾಂಡ್ ಮಂಗಳೂರು ರೋಹನ್ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ತಂಡ ಚಾಂಪಿಯನ್ ಹಾಗು ಹಾಸನ ತಂಡ ರನ್ನರ್ ಆಪ್ ಆಗಿ ಹೊರಹುಮ್ಮಿತು.
ಎರಡು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ರಾಜ್ಯದ 24 ತಂಡಗಳು ಭಾಗವಹಿಸಿದ್ದವು. ಒಟ್ಟು ಆರು ಗುಂಪು ಪಂದ್ಯಾವಳಿಯ ಆರಂಭದಿಂದಲೂ ಸಂಘಟಿತ ಪ್ರದರ್ಶನ ತೋರಿದ ಹಾಸನ ತಂಡ ಒಂದೂ ಸೋಲು ಕಾಣದೆ ಸತತ ಐದು ಗೆಲವು ಸಾಧಿಸಿ ಫೈನಲ್ ಪ್ರವೇಶಿಸಿತ್ತು. ಈ ಹಂತದಲ್ಲಿ ರಾಮನಗರ, ಹಾವೇರಿ, ಬಾಗಲಕೋಟೆ ಹಾಗು ಕೋಲಾರ ಮತ್ತು ಸಮಿಫೈನಲ್‌ನಲ್ಲಿ ಮಂಡ್ಯ ತಂಡಗಳನ್ನು ಸೋಲಿಸಿತ್ತು.
ಹಾಸನ ಹಾಗು ಬೆಂಗಳೂರು ತಂಡದ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ 5 ಓವರ್‌ಗಳಿಗೆ ಕೇವಲ ಒಂದು ವಿಕೆಟ್ ಕಳೆದುಕೊಂಡು 49 ರನ್‌ಗಳಿಸಿತು. 50 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಹಾಸನ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಮೊದಲ ಓವರ್‌ನಲ್ಲೇ ಪ್ರಮುಖ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಂತಿಮವಾಗಿ 5 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಕೇವಲ 24 ರನ್‌ಗಳಿಸಲಷ್ಟೇ ಸಾಧ್ಯವಾಯಿತು.
ಪಂದ್ಯಾವಳಿಯಲ್ಲಿ ಬ್ಯಾಟಿಂಗ್ ಹಾಗು ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಹಾಸನ ತಂಡದ ಅಭಿಜಿತ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಒಟ್ಟು ಆರು ಪಂದ್ಯಗಳಲ್ಲಿ 129 ರನ್‌ಗಳಿಸಿ 5 ವಿಕೆಟ್ ಕಿತ್ತು ಮಿಂಚಿದರು. ರಾಮನಗರ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಅಬ್ಬರ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಜಿತ್ ಕೇವಲ 18 ಎಸೆತಗಳಲ್ಲಿ ನಾಲ್ಕು ಸಿಕ್ಸರ್‌ನೊಂದಿಗೆ 48 ರನ್‌ಗಳಿಸಿ ಜೊತೆಗೆ 1 ವಿಕೆಟ್ ಪಡೆದು ಗಮನ ಸೆಳೆದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು,ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಇಂದಾಜೆ ಮತ್ತಿತರರು ಇದ್ದರು.
ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇದೆ ಮೊದಲ ಬಾರಿಗೆ ಹಾಸನ ತಂಡ ದ್ವಿತೀಯ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಹಿರಿಯ ಪತ್ರಕರ್ತರು ಆಟಗಾರರನ್ನು ಅಭಿನಂದಿಸಿದ್ದಾರೆ.