ಪತ್ರಕರ್ತರ ಮೇಲಿನ ದಾಳಿಗೆ ಆಕ್ರೋಶ

1208Klb06
Published on

ಕಲಬುರಗಿ: ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣದ ವರದಿಗೆ ತೆರಳಿದ ಪತ್ರಕರ್ತರ ಮೇಲೆ ಹಲ್ಲೆ ನಡೆಸಿ ಅವಹೇಳನ ಮಾಡಿದ ದುಷ್ಕರ್ಮಿ ಗಳನ್ನು ಬಂಧಿಸಿ ಗಡಿಪಾರು ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪತ್ರಕರ್ತರು ಹಾಗೂ ಛಾಯಾಗ್ರಾಹಕರು ಪ್ರತಿಭಟನೆ ನಡೆಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಭವಾನಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಆವಂಟಿ, ರಾಜ್ಯ ಸಮಿತಿ ಸದಸ್ಯರಾದ ಹಣಮಂತರಾವ ಭೈರಾಮಡಗಿ, ದೇವೇಂದ್ರಪ್ಪ ಕಪನೂರ ನೇತೃತ್ವದಲ್ಲಿ ಸುಮಾರು ಹೊತ್ತು ಪ್ರದರ್ಶನ ನಡೆಸಿದ ಪತ್ರಕರ್ತರು, ಮಾಧ್ಯಮಗಳ ಮೇಲೆ ಮೇಲಿಂದ ಮೇಲೆ ದಾಳಿ ನಡೆಸುತ್ತಿರುವುದನ್ನು ಖಂಡಿಸಿದರು.
ಬೆಂಗಳೂರಿನ ಡಿಜೆ ಹಳ್ಳಿ, ಕಾವಲ ಭೈರಸಂದ್ರ ಮತ್ತು ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆಯ ವರದಿ ಮಾಡಲು ಹೋದ ಪತ್ರಕರ್ತರು ಹಾಗೂ ವಾಹಿನಿಗಳ ಕ್ಯಾಮರಾಮನ್ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಮಾಧ್ಯಮದವರೆಂದು ಗೊತ್ತಿದ್ದರೂ ಕ್ಯಾಮರಾ ಕಿತ್ತುಕೊಂಡು ಧ್ವಂಸ ಮಾಡಲಾಗಿದೆ. ಪ್ರೆಸ್ ವಾಹನಗಳಿಗೂ ಬೆಂಕಿ ಹಚ್ಚುವ ಮೂಲಕ ಅಟ್ಟಹಾಸ ಮೆರೆದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಲೇವಡಿ ಮಾಡಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಘಟನೆ ಪದೇಪದೆ ಮರುಕಳಿಸುತ್ತಿರುವುದರಿಂದ ಮಾಧ್ಯಮ ಕ್ಷೇತ್ರ ಹಾಗೂ ಪತ್ರಕರ್ತರ ರಕ್ಷಣೆಗೆ ವಿಶೇಷ ಕಾನೂನು ರೂಪಿಸಬೇಕು. ಸರ್ಕಾರದ ಭರವಸೆ ಮಾತುಗಳಿಗಿಂತ ಕಾನೂನು ಕ್ರಮದ ಅಗತ್ಯವಿದೆ. ಕಲಬುರಗಿಯಲ್ಲೂ ಮಾಧ್ಯಮದ ಬಗ್ಗೆ ಅವಹೇಳನಕಾರಿ ಹಾಗೂ ಮಾನಹಾನಿಕಾರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಪೋಸ್ಟ್ ಮಾಡಿರುವ ದುಷ್ಕರ್ಮಿ ವಿರುದ್ಧ ಸಂಘದಿಂದ ಕೇಸ್ ದಾಖಲಿಸಿದ್ದು, ಕೂಡಲೇ ಬಂಧಿಸಬೇಕು ಎಂದು ಡಿಸಿ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮನವಿಪತ್ರದಲ್ಲಿ ಒತ್ತಾಯಿಸಿದರು.
ಹಿರಿಯ ಪತ್ರಕರ್ತರಾದ ಎಸ್.ಬಿ. ಜೋಶಿ, ರಾಮಕೃಷ್ಣ ಬಡಶೇಷಿ, ಶೇಷಮೂರ್ತಿ ಅವಧಾನಿ, ಪತ್ರಕರ್ತರ ಸಂಘದ ಸುರೇಶ ಸಿಂಧೆ, ರಾಜು ದೇಶಮುಖ, ವೀರೇಂದ್ರ ಕೊಲ್ಲೂರ, ಶಿವರಾಮ ಅಸುಂಡಿ, ಸಂಗಮನಾಥ ರೇವತಗಾಂವ, ಸುಭಾಷ ಬಣಗಾರ, ಸಂತೋಷ ಚಿನಗುಡಿ, ಮನೋಜ ಗುದ್ದಿ, ಪ್ರವೀಣ ರೆಡ್ಡಿ, ಸಂಜಯ ಚಿಕ್ಕಮಠ, ಶರಣಯ್ಯ ಹಿರೇಮಠ, ಗೋಪಿ ಕುಲಕರ್ಣಿ ,ಓಂಪ್ರಕಾಶ ಮುನ್ನೂರ, ರಾಜಶೇಖರಯ್ಯ ಸ್ವಾಮಿ, ಅರುಣ ಕದಂ, ಭೀಮಪ್ಪ, ಪುರುಷೋತ್ತಮ ಕುಲಕರ್ಣಿ , ವಿಜಯಕುಮಾರ ವಾರದ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net