

ಚಾಮರಾಜನಗರ: ಜಿಲ್ಲಾ ಪತ್ರಕರ್ತರ ಬೇಡಿಕೆಗಳ ಕುರಿತು ಚರ್ಚಿಸಿ ಹಂತ ಹಂತವಾಗಿ ಈಡೇರಿಸಲು ಮುಂದಾಗುತ್ತೇವೆ ಎಂದು ಪಶು ಸಂಗೋಪನೆ, ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದರು.
ನಗರದ ವರ್ತಕರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದರು.
ಜಿಲ್ಲಾ ಪತ್ರಕರ್ತರ ಭವನದ ಮುಂದುವರಿದ ಕಾಮಗಾರಿಗೆ ನನ್ನೊಟ್ಟಿಗೆ ಸ್ಥಳೀಯ ಶಾಸಕ ಸಿ.ಪುಟರಂಗಶೆಟ್ಟಿ ಹಾಗೂ ಈ ಭಾಗದ ವಿಧಾನಪರಿಷತ್ ಸದಸ್ಯರು ಸಹಕಾರ ನೀಡುವಂತೆ ತಿಳಿಸುತ್ತೇನೆ. ಗ್ರಾಮೀಣ ಪತ್ರಕರ್ತರ ಬಸ್‌ಪಾಸ್ ವಿಚಾರದಲ್ಲಿ ಹಾಗೂ ಇತರೆ ಬೇಡಿಕೆ ಕುರಿತು ಇರುವ ಗೊಂದಲವನ್ನು ಬಗೆಹರಿಸಲಾಗುವುದು ಎಂದರು. ಜಿಲ್ಲೆಯ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಹಳ ಆಸಕ್ತಿಯನ್ನು ವಹಿಸಿದ್ದಾರೆ. ಅದಕ್ಕೆ ಪೂರಕವಾಗಿ ಜಿಲ್ಲೆಗೆ ಬೇಕಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಶಾಸಕರು ಹಾಗೂ ಜಿಲ್ಲೆಯ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.
ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಜಿಲ್ಲೆಯ ಪತ್ರಕರ್ತರ ಭವನದ ಮುಂದುವರಿದ ಕಾಮಗಾರಿಗಾಗಿ ಶಾಸಕರ ಅನುದಾನದಡಿಯಲ್ಲಿ ಶೀಘ್ರದಲ್ಲೇ 25 ಲಕ್ಷ ರೂ, ಅನುದಾನ ನೀಡುತ್ತೇನೆ. ಮುಖ್ಯಮಂತ್ರಿಗಳು ಹೆಚ್ಚುವರಿಯಾಗಿ ಶಾಸಕರ ಅನುದಾನ ನೀಡಿದರೆ ಅದರಲ್ಲೂ ಸಹ ಅನುದಾನ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಪತ್ರಕರ್ತರಿಗೆ ನಿವೇಶನ ನೀಡಿ ಎಂಬ ಬೇಡಿಕೆ ನಿರಂತರವಾಗಿದೆ. ಈ ಸಂಬಂಧ ಆದಷ್ಟು ಬೇಗ ಕ್ರಮಕೈಗೊಳ್ಳುತ್ತೇವೆ. ಜಿಲ್ಲೆಯಲ್ಲಿ ಸುಮಾರು 1300 ನಿವೇಶನಗಳನ್ನೂ ಹಂಚಬೇಕಾಗಿದೆ. ಅದರಲ್ಲಿ ಲೇ ಔಟ್ ಮಾಡಿ ಕುಡಿಯುವ ನೀರು, ವಿದ್ಯುತ್, ಒಳಚರಂಡಿಗೆ ವ್ಯವಸ್ಥೆ ಮಾಡಬೇಕು ಇದರ ಅಂದಾಜು ವೆಚ್ಚ 43 ಕೋಟಿ ರೂ,ಕೋರಿ ವರದಿ ಸಲ್ಲಿಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಯನ್ನು ಪತ್ರಕರ್ತರಾದ ವಿ.ಗಂಗಾಧರ್, ಸುರೇಶ್ ಅಜ್ಜಾಪುರ, ಮಹೇಶ್ ಮಡಹಳ್ಳಿ, ಎಂ.ಮರಿಸ್ವಾಮಿ, ಇರ್ಫಾನ್ ಅವರಿಗೆ ನೀಡಿ ಗೌರವಿಸಲಾಯಿತು. ಎಸ್‌ಎಸ್‌ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪತ್ರಕರ್ತರು ಹಾಗೂ ಅವರ ಕುಟುಂಬದವರು ಭಾಗವಹಿಸಿದ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಮೋನಾ ರೊತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿಕವಿತಾ, ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ, ರಾಜ್ಯ ಪರಿಷತ್ ಸದಸ್ಯ ಗೂಳಿಪುರ ನಂದೀಶ್, ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಲಕ್ಕೂರು, ವರ್ತಕರ ಸಂಘದ ಅಧ್ಯಕ್ಷ ಎನ್.ಶಂಕರ್ ಹಾಗೂ ಇತರರು ಹಾಜರಿದ್ದರು.