ಪತ್ರಕರ್ತರ ಬದುಕು ಸುಸ್ಥಿರವಾಗಿಲ್ಲ

18 CRP 01
Published on

ಚನ್ನರಾಯಪಟ್ಟಣ: ಸಮಾಜದ ಒಳಿತಿಗಾಗಿ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ಪತ್ರಕರ್ತರ ಬದುಕು ಸುಸ್ಥಿರವಾಗಿಲ್ಲ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಕಳವಳ ವ್ಯಕ್ತಪಡಿಸಿದರು.


ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಪತ್ರಕರ್ತ ವೃತ್ತಿಯಿಂದ ಸಾರ್ಥಕತೆಯ ಬದುಕು ಕಾಣಬಹುದು. ಆದರೆ ಆರ್ಥಿಕ ನೆಲೆ ಇರುವುದಿಲ್ಲ. ವಸ್ತುಸ್ಥಿತಿಗೆ ಅನುಗುಣವಾಗಿ ಧರ್ಮಾಧಾರಿತ ಬರಹದೊಂದಿಗೆ ಸಮಾಜದ ಅಂಕು ಡೊಂಕು ತಿದ್ದುವ ಪತ್ರಕರ್ತರ ಬದುಕು ಅಸನಾಗಬೇಕಿದ್ದು ಸರ್ಕಾರವು ಬಸ್ ಪಾಸ್, ಗೌರವಧನ, ಪಿಂಚಣಿ ವ್ಯವಸ್ಥೆ, ನಿವೇಶನ ಸೇರಿದಂತೆ ಇತರೆ ಯೋಜನೆಗಳನ್ನು ರೂಪಿಸಿ ಅನುಕೂಲ ಒದಗಿಸಬೇಕು ಎಂದು ಒತ್ತಾಯಿಸಿದರಲ್ಲದೆ, ಪತ್ರಕರ್ತರ ಬೇಡಿಕೆಯಂತೆ ಶೀಘ್ರದಲ್ಲಿಯೇ ಪಟ್ಟಣ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಗುರುತಿಸಿ ನಿವೇಶನ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಯೂಟ್ಯೂಬ್ ಹಾಗೂ ಸಾಮಾಜಿಕ ಜಾಲತಾಣಗಳ ಪತ್ರಕರ್ತರ ಹಾವಳಿ ನಡುವೆ ನಿಜವಾದ ಪತ್ರಕರ್ತ ಕಳೆದು ಹೋಗುತಿದ್ದಾನೆ. ಅದು ನಿಲ್ಲಬೇಕು. ಚಿಕ್ಕ ಪತ್ರಿಕೆಯಾಗಲಿ ಚೊಕ್ಕ ಬರಹದ ಮೂಲಕ ಸಮಾಜದ ಗಮನ ಸೆಳೆಯುವ ಕೆಲಸವಾಗಬೇಕು. ಪತ್ರಕರ್ತರ ವೃತ್ತಿ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಸಂಘ ಹಾಗೂ ವೃತ್ತಿಗೆ ಅಗೌರವ ತೋರುವ ಅಥವಾ ಚ್ಯುತಿ ತರುವ ಸನ್ನಿವೇಶಕ್ಕೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.


ಕತ್ತರಿಘಟ್ಟದ ಮೆಳಿಯಮ್ಮ ಆಧ್ಯಾತ್ಮಿಕ ಕೇಂದ್ರದ ಚಂದ್ರಶೇಖರ ಗುರೂಜಿ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ನಿಕಟಪೂರ್ವ ಅಧ್ಯಕ್ಷ ಜಯರಾಂ ಹಾಗೂ ಪ್ರಧಾನ ಕಾರ್ಯದರ್ಶಿ ದಯಾನಂದ್ ಅವರು ನೂತನ ಅಧ್ಯಕ್ಷ ಸಿದ್ದರಾಜು ಹಾಗೂ ಪ್ರಧಾನ ಕಾರ್ಯದರ್ಶಿ ನಟೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು

.ಟಿಎಪಿಸಿಎಂಎಸ್ ಅಧ್ಯಕ್ಷ ಕುಂಬಾರಹಳ್ಳಿ ರಮೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎನ್.ಲೋಕೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳುಗೋಪಾಲ್, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಎಚ್.ಬಿ.ಮದನಗೌಡ, ರವಿ ನಾಕಲಗೂಡು, ನೂತನ ಅಧ್ಯಕ್ಷ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ನಟೇಶ್, ಉಪಾಧ್ಯಕ್ಷ ಚನ್ನೇಗೌಡ, ಖಜಾಂಚಿ ಪಾಂಡುರಂಗ, ಹಿರಿಯ ಪತ್ರಕರ್ತರಾದ ಅಶೋಕ್, ಬೊಮ್ಮೇಗೌಡ, ಪದಾಧಿಕಾರಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net