ಪತ್ರಕರ್ತನಿಗೆ ವಿಷಯ ಗ್ರಹಿಸುವ ಗುಣ ಇರಬೇಕು:ಪ್ರೊ. ಎಂ.ಎಸ್. ಸಪ್ನಾ

ಪತ್ರಕರ್ತನಿಗೆ ವಿಷಯ ಗ್ರಹಿಸುವ ಗುಣ ಇರಬೇಕು:ಪ್ರೊ. ಎಂ.ಎಸ್. ಸಪ್ನಾ
Published on

ಹಾಸನ: ಯಾರು ಜನರ ಮಧ್ಯೆ ನಿಂತು ಮಾತನಾಡುವ ಶಕ್ತಿ ಬೆಳೆಸಿಕೊಳ್ಳುತ್ತಾರೆ, ಹೆಚ್ಚು ವಿಷಯ ಗ್ರಹಿಸುವ ಗುಣ ಬೆಳೆಸಿಕೊಂಡಿರುತ್ತಾರೆ ಅವರು ಬಲಿಷ್ಠ ಪತ್ರಕರ್ತರಾಗುತ್ತಾರೆ ಎಂದು ಮೈಸೂರು ಮಾನಸ ಗಂಗೋತ್ರಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಎಂ.ಎಸ್. ಸಪ್ನಾ ಹೇಳಿದರು.
ನಗರದ ಆರ್.ಸಿ. ರಸ್ತೆ ಬಳಿ ಇರುವ ಸರ್ಕಾರಿ ಕಲಾ ಕಾಲೇಜು ಸಭಾಂಗಣದಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು, ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮಾಧ್ಯಮ ಲೋಕದ ಉದ್ಯೋಗಕ್ಕೆ ಪೂರ್ವಭಾವಿ ತಯಾರಿಗಳು ಹಾಗೂ ಸರ್ಕಾರಿ ಉದ್ಯೋಗಕ್ಕೆ ಪೂರ್ವಭಾವಿ ಸಿದ್ಧತೆ ಕುರಿತು ಒಂದು ದಿನದ ಶೈಕ್ಷಣಿಕ ವಿಶೇಷ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪತ್ರಿಕೋದ್ಯಮದ ಇತಿಹಾಸ ತಿಳಿಯುವುದು ಬಹಳ ಮುಖ್ಯ. ಪ್ರಸ್ತುತದಲ್ಲಿ ಪ್ರತಿ ವಿಚಾರದಲ್ಲೂ ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನೀವು ಪತ್ರಿಕೋದ್ಯಮದಲ್ಲಿ ಪಡೆಯುವ ಅಂಕಗಳಿಂದ, ಮೆಡಲ್‌ಗಳಿಂದ ಕೆಲಸ ಸಿಗುತ್ತದೆ ಎಂದು ಅಂದುಕೊಳ್ಳಬೇಡಿ. ಇದು ಪಾಠ ಮಾತ್ರ. ಅದರೆ ಪತ್ರಕರ್ತರಾಗಲು ಮುಖ್ಯವಾಗಿ ಬೇಕಾಗಿರುವುದು ಉತ್ತಮ ಬರವಣಿಗೆ, ಕನ್ನಡ, ಇಂಗ್ಲಿಷ್ ಭಾಷೆ ಬಗ್ಗೆಯೂ ಜ್ಞಾನ ಮತ್ತು ಹೆಚ್ಚು ಓದಿ ವಿಚಾರಗಳನ್ನು ತಿಳಿದುಕೊಳ್ಳಬೇಕು. ಪ್ರಸ್ತುತದಲ್ಲಿ ಮಕ್ಕಳು ಓದುವುದನ್ನು ಕಡಿಮೆ ಮಾಡಿಬಿಟ್ಟಿದ್ದಾರೆ. ಹೆಚ್ಚಾಗಿ ಸಾಮಾಜಿಕ ಜಾಲತಾಣದ ಕಡೆ ಗಮನ ಹರಿಸಿದ್ದಾರೆ. ಹೆಚ್ಚು ಓದಿದಷ್ಟು ನಮ್ಮ ಜ್ಞಾನ ಹೆಚ್ಚುತ್ತದೆ. ವಿಷಯವನ್ನು ಯಾರು ಹೆಚ್ಚು ಗ್ರಹಿಸುತ್ತಾರೆ ಅವರು ಹೆಚ್ಚು ಬಲಿಷ್ಠರಾಗುತ್ತಾರೆ. ವಿಷಯಗಳು ತಲೆಯಲ್ಲಿ ಇದ್ದಾಗ ಮಾತ್ರ ಜನರ ಮಧ್ಯೆ ಮಾತನಾಡುವುದಕ್ಕೆ ಸಾಧ್ಯ ಎಂದು ಕಿವಿಮಾತು ಹೇಳಿದರು.
ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್ ಮಾತನಾಡಿ, 19ನೇ ಶತಮಾನದಲ್ಲಿ ಸಮಾಜ ಸುಧಾರಣೆ ಆಗಿದ್ದು, ಇದಕ್ಕೆ ಕಾರಣವಾದದು ಪತ್ರಿಕೋದ್ಯಮ. ಈ ಪತ್ರಿಕೋದ್ಯಮವೇ ಸಮಾಜದಲ್ಲಿ ಇಲ್ಲದೇ ಇದ್ದರೇ ಸಮಾಜದಲ್ಲಿ ಘೋರ ವಿಚಿತ್ರಗಳು ನಡೆದು ಕ್ರಾಂತಿಗೆ ಕಾರಣವಾಗುತಿತ್ತು. ಖಡ್ಗಕ್ಕಿಂತ ಲೇಖನಿ ಹರಿತ ಎಂದು ಹೇಳಲಾಗುತ್ತದೆ. ಇಂದು ಯಾವುದನ್ನೂ ಗೆಲ್ಲಲು, ಪರಿವರ್ತಿಸಲು ಖಡ್ಗ ವೇ ಬೇಕಾಗಿಲ್ಲ. ಒಂದು ಸಮಾಜದ ಪರಿವರ್ತನೆಗೆ ಒಂದು ಲೇಖನಿ ಸಾಕು. ರಾಷ್ಟ್ರಗಳ ನಿಲುವು, ಅಧ್ಯಕ್ಷರು, ರಾಜಕೀಯ ಚಿತ್ರಣಗಳನ್ನೇ ಬದಲಾಯಿಸುವಂತ ಕೆಲಸ ಈ ಪತ್ರಿಕೋದ್ಯಮ ಎಂದು ಹೇಳಿದರು.
ಪತ್ರಕರ್ತರು ಪ್ರತಿನಿತ್ಯ ಸವಾಲಿನಿಂದಲೇ ಕೆಲಸ ಮಾಡುತ್ತಾರೆ. ಉತ್ತಮ ಪತ್ರಕರ್ತರು ಸಮಾಜ ಸುಧಾರಣೆಯ ದೃಢ ಸಂಕಲ್ಪದೊಂದಿಗೆ ಶ್ರಮಿಸುತ್ತಿದ್ದಾರೆ. ಬೇಕಾದಷ್ಟು ಟೀಕೆ-ಟಿಪ್ಪಣಿಯೊಂದಿಗೆ ಪತ್ರಕರ್ತರು ದಿಟ್ಟ ಮನಸ್ಸಿನಿಂದ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಸ್ವಾತಂತ್ರೃ ಪೂರ್ವ ಹಾಗೂ ಸ್ವಾತಂತ್ರೃದ ನಂತರ ಭಾರತ ದೇಶದಲ್ಲಿ ಹಲವಾರು ಬದಲಾವಣೆಗಳಾಗಲು ಪತ್ರಿಕೋದ್ಯಮದ ಕೊಡುಗೆ ಅಪಾರವಾದದ್ದು. ಪತ್ರಿಕೋದ್ಯಮ ಇಲ್ಲದಿದ್ದರೆ ಈ ದೇಶದ ಸ್ವಾತಂತ್ರೃ ಚಳುವಳಿ ಮುನ್ನಡೆಸಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಮೂಲೆ ಮೂಲೆಗೆ ಸಂದೇಶ ರವಾನೆ ಮಾಡಿರುವುದು ಪತ್ರಿಕೆಗಳು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ಎ.ವಿ. ರಶ್ಮಿ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯಕ್ತರಾದ ಎಂ.ಬಿ. ಚನ್ನಕೇಶವ, ಪತ್ರಾಂಕಿತ ವ್ಯವಸ್ಥಾಪ ಕೆ.ಟಿ. ಸತ್ಯಮೂರ್ತಿ, ಪರೀಕ್ಷಾ ನಿಯಂತ್ರಕರು ಕೆ.ಡಿ. ಮುರಳೀಧರ್, ಉಪನ್ಯಾಸಕರಾದ ಎಚ್.ಸಿ. ಭವ್ಯಾ, ಕೆ.ಎ. ಶ್ರುತಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net