

ಹಾಸನ: ಚನ್ನರಾಯಪಟ್ಟಣ ತಾಲ್ಲೂಕು ಹಿರೀಸಾವೆ ಹೋಬಳಿಯ ಹಿರಿಯ ಪತ್ರಕರ್ತ ಚಿನ್ನಸ್ವಾಮಿ (68) ಅವರು ಅಪಘಾತದಲ್ಲಿ ಸಾವನ್ನಪ್ಪಿದ ಹಿನ್ನೆಲೆ ಗುರುವಾರ ಜಿಲ್ಲಾ ಪತ್ರಕರ್ತ ಸಂಘದಿಂದ ಸಂತಾಪ ಸೂಚಿಸಲಾಯಿತು.
ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹೆಚ್.ವಿ.ಮದನ್‌ಗೌಡ ಮಾತನಾಡಿ, ಚಿನ್ನಸ್ವಾಮಿ ಅವರು ಗ್ರಾಮೀಣ ಭಾಗದ ಪತ್ರಕರ್ತರಾಗಿ ಚನ್ನರಾಯಪಟ್ಟಣ ಮತ್ತು ಹಾಸನ ಸಂಘದಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಹಲವು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದ ಅವರ ನಿಧನ ತೀವ್ರ ನೋವು ತಂದಿದೆ ಎಂದು ಹೇಳಿದರು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿ ಸಂತಾಪ ಸೂಚಿಸಿದರು. ಇದಕ್ಕೂ ಮೊದಲು ಪತ್ರಕರ್ತರು ಮೌನಾಚರಣೆ ಮಾಡುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಂಜು ಬನವಾಸೆ ಸೇರಿದಂತೆ ಇನ್ನಿತರರು ಹಾಜರಿದ್ದರು.