

ಹಾಸನ: ಪತಿ ಕುಡಿಯುತ್ತಾನೆ, ಸಂಪಾದನೆ ಮಾಡುವುದಿಲ್ಲ ಎಂಬ ಕಾರಣಕ್ಕೆ ಪತ್ನಿಯೇ ಪತಿಯನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಮಂಗಳವಾರ ಮಧ್ಯಾಹ್ನ ಪತ್ನಿ ಸುಶೀಲಾ ಎಂಬಾಕೆಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಅರಸೀಕೆರೆ ತಾಲೂಕಿನ ಜಾವಗಲ್ ಹೋಬಳಿಯ ತಿಮ್ಲಾಪುರ ಗ್ರಾಮದ ರಾಮಣ್ಣ (55) ಮೃತ ವ್ಯಕ್ತಿ.
ರಾಮಣ್ಣನಿಗೆ 16 ವರ್ಷಗಳ ಹಿಂದೆ ಕಡೂರು ತಾಲೂಕಿನ ಕಾನಗೊಂಡನಹಳ್ಳಿ ಗ್ರಾಮದ ಹನುಮಂತಪ್ಪ ಅವರ ಮಗಳು ಸುಶೀಲಾ ಎಂಬುವವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ 14 ವರ್ಷದ ಹರ್ಷವರ್ಧನ ಮತ್ತು 9 ವರ್ಷದ ಹರ್ಷಿತಾ ಎಂಬ ಮಕ್ಕಳಿದ್ದಾರೆ.
ರಾಮಣ್ಣನಿಗೆ ಮೂರ್ಛೆ ರೋಗವಿದ್ದು, ಯಾವುದೇ ಕೆಲಸ ಮಾಡಲು ಆಗದೇ ಓಡಾಡಿಕೊಂಡಿದ್ದರು. ಆತನ ಹೆಂಡತಿ ಸುಶೀಲಾ ಕೂಲಿ ಕೆಲಸ ಮಾಡಿಕೊಂಡಿದ್ದು, ರಾಮಣ್ಣ ಕುಡಿಯುವ ಚಟಕ್ಕೆ ಬಿದ್ದು ಮನೆಯಲ್ಲಿನ ಕಾಯಿ, ಕೊಬ್ಬರಿಯನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಕುಡಿಯುತ್ತಿದ್ದ. ಇದರಿಂದ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು.
ಆ.11ರ ರಾತ್ರಿ 8 ಗಂಟೆಯ ಸಮಯದಲ್ಲಿ ಸುಶೀಲಾ ಒಂದೇ ಉಸಿರಿನಲ್ಲಿ ಗಾಬರಿಯಾದಂತೆ ಜಮೀನೊಂದರಿಂದ ನಡೆದುಕೊಂಡು ಬರುವುದನ್ನು ರಾಮಣ್ಣ ಸಹೋದರ ಗಿರಿಯಪ್ಪ ನೋಡಿದ್ದಾರೆ. ಆ.12ರ ಸೋಮವಾರ ಬೆಳಿಗ್ಗೆ 8 ಗಂಟೆಗೆ ರಾಮಣ್ಣ ಮೃತಪಟ್ಟಿರುವ ವಿಷಯ ತಿಳಿದುಬಂದಿದೆ.
ಸುಶೀಲಾ ತನ್ನ ಗಂಡ ರಾಮಣ್ಣನನ್ನು ಆತನ ಪಂಚೆಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ ಎಂದು ಆರೋಪಿಸಿ ಮೃತನ ಸಹೋದರ ಗಿರಿಯಪ್ಪ ಜಾವಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸುಶೀಲಾಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.