ಪತ್ನಿಯಿಂದ ಹಲ್ಲೆಗೊಳಗಾಗಿದ್ದ ಪತಿ ಸಾವು

88888
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಪತ್ನಿ ಹಾಗೂ ಅಪ್ರಾಪ್ತ ಪುತ್ರನಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಚಿಕಿತ್ಸೆ ಲಿಸದೆ ಬುಧವಾರ ಹೆಸರಘಟ್ಟ ಬಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.
ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿಯ ತಮ್ಮೇನಹಳ್ಳಿ ನಿವಾಸಿ ಮುನಿರಾಜು(41) ಮೃತ. ಕೊಲೆ ಆರೋಪದ ಮೇಲೆ ಮುನಿರಾಜು ಪತ್ನಿ ಗೀತಾ(36), ಅಪ್ರಾಪ್ತ ಪುತ್ರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಶ್ಲೀಲ ವಿಡಿಯೋ ತೋರಿಸಿ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಹಾಗೂ ಪುತ್ರ ದೊಣ್ಣೆಯಿಂದ ಹಲ್ಲೆ ಮಾಡಿದ್ದರು.

ಪ್ರಕರಣವೇನು?: 20 ವರ್ಷದ ಹಿಂದೆ ಮುನಿರಾಜು, ಗೀತಾ ಮದುವೆಯಾಗಿದ್ದು, ಪಿಯುಸಿ ವ್ಯಾಸಂಗ ಮಾಡುತ್ತಿರುವ ಪುತ್ರನಿದ್ದಾನೆ. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಮುನಿರಾಜು, ತಮ್ಮೇನಹಳ್ಳಿಯಲ್ಲಿ ವಾಸವಿದ್ದು, ಆ.7ರಂದು ಮದ್ಯ ಸೇವನೆ ಮಾಡಿ ಬಂದು ರಾತ್ರಿ 10ಗಂಟೆ ಸುಮಾರಿನಲ್ಲಿ ಗೀತಾಗೆ ಅಶ್ಲೀಲ ವಿಡಿಯೋ ತೋರಿಸಿ ಅಸಹ್ಯವಾಗಿ ವರ್ತಿಸಿದ್ದ. ಪತ್ನಿ ನಿರಾಕರಿಸಿದಕ್ಕೆ ಕೋಪಗೊಂಡು ಹಲ್ಲೆಯನ್ನೂ ಮಾಡಿದ್ದ. ಬಳಿಕ ಮಗ ಮಧ್ಯಪ್ರವೇಶ ಮಾಡಿ ಜಗಳ ನಿಯಂತ್ರಣ ಮಾಡಿದ್ದು, ಮಗನ ಮೇಲೂ ಮುನಿರಾಜು ಹಲ್ಲೆ ಮಾಡಿದ್ದಾನೆ. ಬಳಿಕ ಇಬ್ಬರೂ ಸೇರಿಕೊಂಡು ದೊಣ್ಣೆಯಿಂದ ತಲೆಗೆ ಹೊಡೆದು ಮನೆಯಿಂದ ಹಾಕಿದ್ದಾರೆ. ಗಾಯಗೊಂಡ ಮುನಿರಾಜು ಗ್ರಾಮದ ದೇವಾಲಯ ಮುಂಭಾಗದಲ್ಲಿ ಮಲಗಿರುವುದನ್ನು ಕಂಡ ಸ್ಥಳೀಯರು ಹೆಸರಘಟ್ಟ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಳೀಯರು ಮಾದನಾಯಕನಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗೀತಾ ಹಾಗೂ ಆಕೆಯ ಮಗನನ್ನು ವಶಪಡಿಸಿಕೊಂಡಿದ್ದಾರೆ.

ಲೈಂಗಿಕ ಕಿರುಕುಳ: ಮೃತ ಮುನಿರಾಜು ಮೊಬೈಲ್‌ನಲ್ಲಿ ನಿತ್ಯ ಅಶ್ಲೀಲ ವಿಡಿಯೋ ತೋರಿಸಿ ಅದರಂತೆ ಸಹಕಾರ ನೀಡುವಂತೆ ಪತ್ನಿ ಗೀತಾಗೆ ಕಿರುಕುಳ ನೀಡುತ್ತಿದ್ದು, ಈ ವಿಚಾರವಾಗಿ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಈ ವಿಚಾರವಾಗಿ 3 ಬಾರಿ ಮಾದನಾಯಕನಹಳ್ಳಿ ಠಾಣೆಗೆ ದೂರು ನೀಡಲಾಗಿತ್ತು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net