

ಮೈಸೂರು: ಪತಿ ಮನೆಗೆ ತೆರಳದೆ ತವರು ಮನೆ ಸೇರಿಕೊಂಡಿದ್ದ ಹೆಂಡತಿಯನ್ನು ಗಂಡನೇ ಕುಂಬಾರಕೊಪ್ಪಲಿನಲ್ಲಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಹರ್ಷಿತಾ(21) ಮೃತರು. ಕುಂಬಾರಕೊಪ್ಪಲಿನ ಹರ್ಷಿತಾ ಮತ್ತು ಗುಂಡ್ಲುಪೇಟೆಯ ಬೀರಂಬಾಡಿ ಗ್ರಾಮದ ಮಹದೇವ್(30)ಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿತ್ತು. ಆದರೆ, ಈ ನಡುವೆ ಸತಿ-ಪತಿಗಳ ನಡುವೆ ಜಗಳ ಆಗುತ್ತಿತ್ತು. ಕುಟುಂಬದ ಹಿರಿಯರು ಸಂಧಾನ ಮಾಡಿ, ಒಂದಾಗಿ ಬಾಳುವಂತೆ ಸೂಚಿಸಿದ್ದರು. ಕೆಲ ದಿನಗಳ ಹಿಂದೆ ಪತಿಯೊಂದಿಗೆ ಮತ್ತೆ ಮನಸ್ತಾಪ ಉಂಟಾಗಿದ್ದರಿಂದ ಹರ್ಷಿತಾ ತವರು ಮನೆ ಸೇರಿದ್ದರು.
ಶನಿವಾರ ಮಧ್ಯಾಹ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಮಹದೇವ್ ಬಂದಿದ್ದಾನೆ. ಆದರೆ, ಹರ್ಷಿತಾ ಗಂಡನೊಂದಿಗೆ ಹೋಗಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಈತ, ಚಾಕುವಿನಿಂದ ಪತ್ನಿಗೆ ಇರಿದು ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ನೆರೆಹೊರೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹರ್ಷಿತಾಳನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಕುಟುಂಬದವರು ನೀಡಿದ ದೂರಿನ ಮೇರೆಗೆ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡಿದ್ದಾರೆ.