ಪತ್ನಿಯನ್ನು ಕೊಲೆ ಮಾಡಿ "ಆತ್ಮಹತ್ಯೆ ಮಾಡಿಕೊಂಡಿದ್ದಾಳೆ' ಎಂದು ಕಥೆ ಕಟ್ಟಿದ ಪತಿ ಬಂಧನ

arrested
Published on

ಮೈಸೂರು: ಪತ್ನಿಯನ್ನು ಕೊಲೆ ಮಾಡಿ ಮನೆಯ ನೀರಿನ ಸಂಪ್‌ನಲ್ಲಿ ಹಾಕಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಲನಹಳ್ಳಿ ಬಳಿಯ ಆಶ್ರಯ ಬಡಾವಣೆಯಲ್ಲಿ ಮಂಗಳವಾರ ಈ ಕೃತ್ಯ ನಡೆದಿದ್ದು, ಶಿವಮಣಿ(34) ಹತ್ಯೆಯಾದ ಮಹಿಳೆ. ಚೌಡಪ್ಪ ಕೊಲೆ ಮಾಡಿದ ಆರೋಪಿ.

ಪತ್ನಿಯ ಶೀಲ ಶಂಕಿಸಿ ಪದೇ ಪದೆ ಈತ ಜಗಳ ಮಾಡುತ್ತಿದ್ದ. ಆರು ತಿಂಗಳ ಹಿಂದೆ ಈ ವಿಷಯಕ್ಕೆ ಗಲಾಟೆ ಮಾಡಿತ ಈತ, ಹೆಂಡತಿ ಮೇಲೆ ಹಲ್ಲೆಯನ್ನೂ ಮಾಡಿದ್ದ. ಇದಕ್ಕೆ ಪ್ರತಿಯಾಗಿ ಶಿವಮಣಿ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಈ ಸಂದರ್ಭದಲ್ಲಿ ಪೊಲೀಸರು ಚೌಡಪ್ಪನಿಗೆ ‘ಹೆಂಡತಿಯೊಂದಿಗೆ ಸೌಹಾರ್ದಯುತವಾಗಿ ಜೀವನ ನಡೆಸಿಕೊಂಡು ಹೋಗುವಂತೆ’ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದರು.

ಮಂಗಳವಾರ ಸಹ ಪತ್ನಿಯೊಂದಿಗೆ ಚೌಡಪ್ಪ ಜಗಳ ತೆಗೆದಿದ್ದಾನೆ. ಹಲ್ಲೆ ನಡೆಸುವ ಮೂಲಕ ಹತ್ಯೆ ಮಾಡಿದ್ದಾನೆ. ನಂತರ ತಾನು ಕೊಲೆ ಮಾಡಿರುವ ವಿಚಾರ ಮುಚ್ಚಿಡಲು ಪ್ರಯತ್ನಿಸಿದ್ದು, ನೀರಿನ ಸಂಪ್‌ನಲ್ಲಿ ಮೃತದೇಹವನ್ನು ಹಾಕಿದ್ದಾನೆ.

ಬಳಿಕ ಆಕೆಯೇ ಕಾಲು ಜಾರಿ ಸಂಪ್‌ನೊಳಗೆ ಬಿದ್ದು ಮೃತಪಟ್ಟಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾನೆ.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿ ಪೊಲೀಸರು, ಅನುಮಾನಗೊಂಡು ಚೌಡಪ್ಪನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಆಗ ನಿಜವನ್ನು ಬಾಯ್ಬಿಟ್ಟಿದ್ದು, ತಾನೇ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮೃತರ ಕುಟುಂಬದವರು ನೀಡಿದ ದೂರಿನ ಮೇರೆಗೆ ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net