

ಚಾಮರಾಜನಗರ: ತಲೆಯಲ್ಲಿ ಕೂದಲಿಲ್ಲ ಎಂದು ಕಿರುಕುಳ ನೀಡುತ್ತಿದ್ದ ಪತ್ನಿಯ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್ ಬರೆದಿಟ್ಟು ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ತಾಲೂಕಿನ ಉಡಿಗಾಲ ಗ್ರಾಮದ ನಿವಾಸಿ ಪರಶಿವಮೂರ್ತಿ(32) ಮೃತ ಪತಿ. ಕಳೆದ 2 ವರ್ಷಗಳ ಹಿಂದೆ ಪರಶಿವಮೂರ್ತಿ ಮತ್ತು ಮಮತಾ ವಿವಾಹವಾಗಿದ್ದರು. ವೃತ್ತಿಯಲ್ಲಿ ಚಾಲಕನಾಗಿದ್ದ ಪರಶಿವಮೂರ್ತಿ ಕೂದಲು ಮದುವೇಯಾದ ಬಳಿಕ ಸಂಪೂರ್ಣವಾಗಿ ಉದುರಿತ್ತು. ಈ ಸಂದರ್ಭದಲ್ಲಿ ತಲೆಯಲ್ಲಿ ಕೂದಲಿಲ್ಲ ಎಂದು ಪರಶಿವಮೂರ್ತಿಗೆ ಪತ್ನಿ ಮಮತಾ ಆಗಾಗ ಅಪಹಾಸ್ಯ ಮಾಡುತ್ತಿದ್ದರು. ನಿಮ್ಮ ಜತೆಗೆ ಹೊರಗಡೆ ಹೋದರೆ ನನಗೆ ನಾಚಿಕೆಯಾಗುತ್ತದೆ ಎಂದು ಮನಸ್ಸಿಗೆ ಚುಚ್ಚುವ ಮಾತುಗಳನ್ನಾಡಿದ್ದರು.
ಈ ಹಿಂದೆಯೂ ಪರಶಿವಮೂರ್ತಿ ಮತ್ತು ಮಮತಾ ನಡುವೆ ದಾಂಪತ್ಯ ಜೀವನ ಸರಿಯಿಲ್ಲ ಎಂಬ ಕಾರಣಕ್ಕೆ ಜಗಳವಾಡಿಕೊಂಡಿದ್ದರು. ಅದಲ್ಲದೇ ಮಮತಾ ಮುಂದುವರಿದು ಪತಿಯ ಮೇಲೆ ವರದಕ್ಷಿಣೆ ಕಿರುಕುಳದ ಪ್ರಕರಣ ದಾಖಲಿಸಿದ್ದರು ಎಂದು ಹೇಳಲಾಗಿದೆ. ಈ ನಡುವೆ ಪರಶಿವಮೂರ್ತಿ ಪತ್ನಿ ಮಮತಾ ಮೊಬೈಲ್ ಗೀಳು ಹೆಚ್ಚಾಗಿ ಬೆಳೆಸಿಕೊಂಡಿದ್ದಳು ಎಂಬ ಕಾರಣಕ್ಕೆ ಬೇಸತ್ತು ಹೋಗಿದ್ದನು.
ಹೆಂಡತಿ ಮಮತಾ ಪದೇಪದೇ ನಿಮಗೆ ತಲೆಯಲ್ಲಿ ಕೂದಲು ಇಲ್ಲ, ಬೋಳು ತಲೆ ಎಂದು ಅಪಹಾಸ್ಯ ಮಾಡುತ್ತಿದ್ದದ್ದನ್ನು ಸಹಿಸಿಕೊಳ್ಳಲಾಗದೇ ಡೆತ್‌ನೋಟ್ ಬರೆದಿಟ್ಟು ಪರಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.