ಪತ್ನಿಯ ಕತ್ತು ಕೊಯ್ದು ಕೊಲೆಗೈದ ಪತಿ

25Ravig5
Published on

ಬೆಳಗಾವಿ: ನಗರದ ಜನನಿಬಿಡ ರಸ್ತೆಯಲ್ಲಿ ಹಾಡಹಗಲೇ ವ್ಯಕ್ತಿಯೋರ್ವ ಮಾರಕಾಸ್ತ್ರದಿಂದ ಪತ್ನಿಯ ಕತ್ತು ಕೊಯ್ದು ಕೊಲೆಗೈದ ಘಟನೆ ಶುಕ್ರವಾರ ನಡೆದಿದೆ. ಬೈಲಹೊಂಗಲ ತಾಲೂಕಿನ ದೇವಲಾಪುರದ ಹೀನಾಕೌಸರ್ ಮಂಜೂರ್‌ಇಲಾಯಿ ನದಾಫ್(27) ಹತ್ಯೆಗೀಡಾದ ಮಹಿಳೆ. ಆಕೆಯ ಪತಿ ಮಂಜೂರ್ ಇಲಾಯಿ ಬಾಬುಸಾಬ ನಧಾಪ್(34) ಕೊಲೆಗೈದ ಆರೋಪಿ. ದಂಪತಿಗೆ ಅಲಿ(5) ಎಂಬ ಮಗನಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕಳೆದ 8 ತಿಂಗಳಿನಿಂದ ವಿಚ್ಛೇದನಕ್ಕಾಗಿ ಯುವತಿ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಶುಕ್ರವಾರವೂ ವಿಚಾರಣೆ ಇದ್ದುದ್ದರಿಂದ ನಗರಕ್ಕೆ ಆಗಮಿಸಿದ ಯುವತಿ ವಿಚಾರಣೆಗೆ ಹಾಜರಾಗಿ ವಾಪಸ್ ಊರಿಗೆ ತೆರಳುತ್ತಿದ್ದಾಗ ಹಿಂಬಾಲಿಸಿಕೊಂಡು ಹೋಗಿ ಕೃತ್ಯ ಎಸಗಿದ್ದಾನೆ. ಸ್ಥಳದಲ್ಲಿ ಜಮಾಯಿಸಿದ ಪೊಲೀಸರು ಆರೋಪಿಯನ್ನು ಸುತ್ತುವರಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದೆ, ಆರೋಪಿ ಮಂಜೂರ್‌ನನ್ನು ವಶಕ್ಕೆ ಪಡೆದು ಗಾಯಾಳು ಹೀನಾಳನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವದಿಂದಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವುದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕೊಲೆಯಾದ ಹೀನಾಳ ಸಹೋದರ ರಿಜ್ವಾನ್ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net