

ಮೈಸೂರು: ಹೆಂಡತಿಯನ್ನು ಕೊಲೆ ಮಾಡಿದ ಗಂಡನಿಗೆ ಜೀವಾವಧಿ ಶಿಕ್ಷೆ ವಿಧಿಸಿ ನಗರದ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಎಚ್.ಡಿ.ಕೋಟೆ ತಾಲೂಕಿನ ತೊರವಳ್ಳಿಯ ಮೂಲದ, ಹೂಟಗಳ್ಳಿಯ ನಿವಾಸಿ ಸುಂದರ್‌ರಾಜ್‌ಶಿಕ್ಷೆಗೆ ಗುರಿಯಾದ ಅಪರಾಧಿ.
ಚಾಮನಹಳ್ಳಿಯ ನಾರಾಯಣಶೆಟ್ಟಿ ಅವರ ಪುತ್ರಿ ಶಾಂತಲಾ ಅವರೊಂದಿಗೆ ಈತನ ವಿವಾಹವಾಗಿತ್ತು. ದಂಪತಿಗೆ ಪುತ್ರಿ ಇದ್ದಾಳೆ. ಅಕ್ರಮ ಸಂಬಂಧ ಅನುಮಾನದಿಂದ ಹೆಂಡತಿಯೊಂದಿಗೆ ಈತ ಜಗಳ ತೆಗೆಯುತ್ತಿದ್ದ.
ಈ ಕಾರಣಕ್ಕೆ ಬೆಳವಾಡಿಯಿಂದ ಹೂಟಗಳ್ಳಿಗೆ ಮನೆಯನ್ನು ಸ್ಥಳಾಂತರಿಸಲಾಗಿತ್ತು. ಈ ನಡುವೆ, ತವರು ಮನೆಯಿಂದ 2 ಲಕ್ಷ ರೂ. ಹಣ ತೆಗೆದುಕೊಂಡು ಬಾ ಎಂದು ಹೆಂಡತಿಯೊಂದಿಗೆ ಜಗಳ ಮಾಡುತ್ತಿದ್ದ. 2017ರ ಸೆಪ್ಟೆಂಬರ್ 19ರಂದು ಈ ವಿಷಯವಾಗಿ ಮತ್ತೆ ಜಗಳ ತೆಗೆದು ಚಾಕುವಿನಿಂದ ಪತ್ನಿಯನ್ನು ಇರಿದು ಕೊಲೆ ಮಾಡಿದ್ದ. ಬಳಿಕ ಸರಗೂರು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದ.
ಈ ಕುರಿತು ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಲಾಗಿತ್ತು. ಕೋರ್ಟ್‌ನಲ್ಲಿ ವಿಚಾರಣೆ ನಡೆದು ಅಪರಾಧ ಸಾಬೀತಾಗಿತ್ತು.
ನ್ಯಾಯಾಧೀಶೆ ಕೆ.ಭಾಗ್ಯಾ ಅವರು, ಅಪರಾಧಿ ಸುಂದರ್‌ರಾಜ್‌ನಿಗೆ ಕಠಿಣ ಜೀವಾವಧಿ ಶಿಕ್ಷೆ, 1 ಲಕ್ಷ ರೂ. ದಂಡ ವಿಧಿಸಿದ್ದು, ಈ ಹಣವನ್ನು ಮೃತ ಶಾಂತಲಾಳ ಪುತ್ರಿಗೆ ಪಾವತಿಸಲು ಆದೇಶಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ಟಿ.ಎಚ್.ಲೋಲಾಕ್ಷಿ ವಾದ ಮಂಡಿಸಿದ್ದರು.