

ಹಾಸನ: ಪತ್ನಿಯ ವರ್ತನೆಯಿಂದ ಮನನೊಂದು ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕೊಂಡಜ್ಜಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕಾರ್ತಿಕ್(34) ಮೃತ ವ್ಯಕ್ತಿ. ಗ್ರಾಮದ ವಿರೂಪಾಕ್ಷ ಮಗ ಕಾರ್ತಿಕ್‌ಗೆ 3 ವರ್ಷದ ಹಿಂದೆ ಆಲೂರು ತಾಲೂರು ದಾಟೂರು ಗ್ರಾಮದ ಗಣೇಶ ಎಂಬುವರ ಮಗಳು ರಮ್ಯಳನ್ನು ಮದುವೆ ಮಾಡಿಕೊಂಡಿದ್ದರು.
ಆದರೆ ರಮ್ಯ, ಪತಿ ಕಾರ್ತಿಕ್‌ಗೆ ಪ್ರತ್ಯೇಕ ಮನೆ ಮಾಡಿಕೊಂಡು ಇರೋಣ ಎಂದು ನಿತ್ಯವೂ ಕಿರುಕುಳ ನೀಡುತ್ತಿದ್ದಳು. ಈ ವಿಚಾರವಾಗಿಯೇ ತವರು ಮನೆಗೆ ಹೋಗಿದ್ದವಳನ್ನು ರಾಜಿ ಮಾಡಿಕೊಂಡು ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೂ ರಮ್ಯ ತನ್ನ ನಿಲುವು ಬದಲಿಸಿರಲಿಲ್ಲ. ನಂತರ ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಪತಿ ಕಾರ್ತಿಕ್, ಮಾವ ವಿರೂಪಾಕ್ಷ ಹಾಗೂ ಅತ್ತೆಯ ವಿರುದ್ಧ ದೂರು ನೀಡಿದ್ದಳು. ಇದರಿಂದ ಮನನೊಂದು ಕಾರ್ತಿಕ್ ಸೆ.17 ರಂದು ರಾತ್ರಿ 11 ಗಂಟೆ ಸಮಯದಲ್ಲಿ ಮನೆಯಲ್ಲಿ ಎಲ್ಲರೂ ಮಲಗಿದ ನಂತರ ಮನೆಯ ಹೊರಾಂಡದಲ್ಲಿರುವ ಆರ್.ಸಿ.ಸಿ ಹುಕ್‌ಗೆ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದ. ಇದನ್ನು ಗಮನಿಸಿ ಕೂಡಲೇ ಅವರನ್ನು ನೇಣು ಹಗ್ಗದಿಂದ ಇಳಿಸಿ ಹಿಮ್ಸ್ ಆಸ್ಪತ್ರೆಗೆ ಕರೆ ತಂದು ದಾಖಲಿಸಲಾಯಿತು.
ಇಂದು ಬೆಳಗಿನ ಜಾವ 1.50 ರ ಸುಮಾರಿನಲ್ಲಿ ಕಾರ್ತಿಕ್ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮಗನ ಆತ್ಮ್ಮಹತ್ಯೆಗೆ ಸೊಸೆ ರಮ್ಯಾ(25)ಳೇ ಕಾರಣಳಾಗಿದ್ದು, ಆಕೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.