ಪತ್ನಿ ಹಂತಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಮೈಸೂರು ಜಿಲ್ಲಾ ನ್ಯಾಯಾಲಯ

mysoreDistCourt 4 MAR 20
Published on

ಮೈಸೂರು: ಶೀಲಶಂಕಿಸಿ ಪತ್ನಿಯ ಹತ್ಯೆ ಮಾಡಿದ ಅಪರಾಧಿಗೆ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹುಣಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದ ನಿವಾಸಿ ಕಂಚೀಗೌಡ ಜೀವಾವಧಿ ಶಿಕ್ಷೆಗೆ ಗುರಿಯಾದ ಅಪರಾಧಿ. ಈತ ಪತ್ನಿ ಸುಂದರಮ್ಮ ಅವರನ್ನು 10-6-2019 ರಂದು ಕುತ್ತಿಗೆಗೆ ವೇಲು ಬಿಗಿದು ಹತ್ಯೆ ಮಾಡಿದ್ದ. ಈತ 26 ವರ್ಷಗಳ ಹಿಂದೆ ಸುಂದರಮ್ಮ ಅವರನ್ನು ವಿವಾಹವಾಗಿದ್ದ. ಈತ ಪತ್ನಿಯ ಶೀಲಶಂಕಿಸಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸತ್ತ ಸುಂದರಮ್ಮ ಅವರು ಮಗಳನ್ನು ಮೈಸೂರು ನಗರದ ಸರ್ಕಾರಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸಕ್ಕೆ ಸೇರಿಸಿ ಮತ್ತೊಬ್ಬಳು ಮಗಳೊಂದಿಗೆ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ಕೆಲಸಕ್ಕೆ ಸೇರಿಕೊಂಡಿದ್ದರು. ಹಬ್ಬ ಹರಿದಿನ ಇದ್ದಾಗ ಊರಿಗೆ ಬಂದು ಹೋಗುತ್ತಿದ್ದರು.

ರಾಮೇನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಮಾರಿಹಬ್ಬದಲ್ಲಿ ಪಾಲ್ಗೊಳ್ಳಲು ಸುಂದರಮ್ಮ 8-6-2019 ರಂದು ಆಗಮಿಸಿದ್ದರು. ಹಬ್ಬ ಮುಗಿಸಿ ಬೆಂಗಳೂರಿಗೆ ಹೊರಡಲು ಸುಂದರಮ್ಮ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಸಂದರ್ಭ ಕಂಚೀಗೌಡ ಆಕ್ಷೇಪ ವ್ಯಕ್ತಪಡಿಸಿ 9-6-2019ರ ರಾತ್ರಿ ಜಗಳವಾಡಿದ್ದ. ನಂತರ ಮರುದಿನ ಬೆಳಗ್ಗೆ ಇದೇ ವಿಚಾರವಾಗಿ ಜಗಳ ತೆಗೆದು ಆಕೆಯನ್ನು ಹತ್ಯೆ ಮಾಡಿದ್ದ.

ಈತನ ವಿರುದ್ಧ ಹೊರಿಸಲಾದ ಆರೋಪ ಸಾಕ್ಷಾೃಧಾರಗಳಿಂದ ಸಾಬೀತುಗೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಅವರು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಪರಾಧಿಗೆ ಐಪಿಸಿ ಕಲಂ 498 (ಎ) (ಕ್ರೌರ್ಯಕ್ಕೆ ಒಳಪಡಿಸಿದ್ದು) ಪ್ರಕಾರ 2 ವರ್ಷಗಳ ಕಠಿಣ ಶಿಕ್ಷೆ, 2,000 ರೂ. ದಂಡ, ಐಪಿಸಿ ಕಲಂ 302 (ಹತ್ಯೆ) ಪ್ರಕಾರ ಜೀವಾವಧಿ ಶಿಕ್ಷೆ ಹಾಗೂ 15 ಸಾವಿರ ರೂ.ದಂಡ ವಿಧಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ನಾಗಪ್ಪ ಸಿ. ನಾಕ್‌ಮನ್ ವಾದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net