

ಹಾಸನ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಎರಡು ವರ್ಷ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಡಿ.14 ಆದೇಶ ನೀಡಿದೆ.
ಶಿವ ಶಿಕ್ಷೆಗೆ ಒಳಗಾದ ಅಪರಾಧಿ. 1999ರಲ್ಲಿ ಆಲೂರು ತಾಲ್ಲೂಕು ಭೈರಾಪುರ ಗ್ರಾಮದ ರೂಪಾ ಅವರೊಂದಿಗೆ ವಿವಾಹವಾಗಿದ್ದ ಶಿ ಮದುವೆ ಸಂದರ್ಭದಲ್ಲಿ 1 ಲಕ್ಷ ರೂ. ನಗದು, 100 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದಿದ್ದ. ಮದುವೆ ವೇಳೆ ನೀಡಿದ್ದ ವರದಕ್ಷಿಣೆ ಸಾಕಾಗುವುದಿಲ್ಲ. ಇನ್ನು 50 ಸಾವಿರ ರೂ. ತರುವಂತೆ 2011ರಲ್ಲಿ ಒತ್ತಾಯಿಸಲು ಆರಂಭಿಸಿದ. ಈ ವಿಚಾರವಾಗಿ ಹಲವು ರಾಜೀ ಪಂಚಾಯಿತಿ ಸಹ ನಡೆದಿತ್ತು. ನಂತರ ರೂಪಾ ಅವರು ಮನೆಯಿಂದ ಹೊರಗೆ ಹಾಕಿದ್ದ. ವಿಧಿ ಇಲ್ಲದೆ ರೂಪಾ ತವರು ಮನೆಗೆ ಬಂದು ಉಳಿದುಕೊಂಡಿದ್ದರು. 2011ರ ಮಾ.28ರಂದು ಭೈರಾಪುರಕ್ಕೆ ಬಂದ ಶಿವ ಹೆಂಡತಿಯನ್ನು ಕೊಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್‌ನಿಂದ ಹೊಡೆದು ಗಂಭೀರವಾಗಿ ಘಾಸಿಗೊಳಿಸಿದ್ದ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಸಿ.ಸದಾನಂದ ಸ್ವಾಮಿ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗು 20 ಸಾವಿರ ರೂ. ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಎಚ್.ಕೆ.ಸುರೇಶ್ ವಾದ ಮಂಡಿಸಿದ್ದರು.