ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಪತಿ ಬಂಧನ

ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ ಪತಿ ಬಂಧನ
Published on

ಹಾಸನ: ಹೊಳೆನರಸೀಪುರ ತಾಲೂಕಿ ತಿರುಮಲಾಪುರ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ ಪತಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.

ಶ್ರೀನಿವಾಸ ಮತ್ತು ಪತ್ನಿ ಸುನೀತಾ ಎಂಬುವರು 18 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಸಂಸಾರದಲ್ಲಿ ವಿರಸ ಮೂಡಿದ್ದರಿಂದ ಎರಡು ವರ್ಷಗಳಿಂದ ಒಂದೇ ಮನೆಯಲ್ಲಿ ಭಾಗ ಮಾಡಿಕೊಂಡು ಪ್ರತ್ಯೇಕವಾಗಿ ವಾಸವಾಗಿದ್ದರು. ಪತಿಯಿಂದ ದೂರವಾಗಿ ವಿಚ್ಛೇದನಕ್ಕಾಗಿ ಸುನೀತಾ ಕಾನೂನು ಹೋರಾಟ ನಡೆಸುತ್ತಿದ್ದರು.

ಶನಿವಾರ ಸಂಜೆ ಈ ಇಬ್ಬರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿ ನಂತರ ಪತ್ನಿ ಮೇಲೆ ಮಚ್ಚು ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆ ಮಾಡುವುದನ್ನು ವಿಡಿಯೋ ಮಾಡಿ ವೈರಲ್ ಮಾಡಿ ಸಾರ್ವಜನಿಕರವಾಗಿ ದರ್ಪ ಪ್ರದರ್ಶನ ಮಾಡಿದ್ದ ಪತಿಯನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಹಲ್ಲೆಗೆ ಒಳಗಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುನೀತಾ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆರೋಪಿ ಬಂಧನಕ್ಕಾಗಿ ಎರಡು ತಂಡ ರಚಿಸಲಾಗಿತ್ತು. ಆರೋಪಿಗೆ ಮಚ್ಚು ನೀಡಿದ ಆರೋಪದಡಿ ಶ್ರೀನಿವಾಸ ಸಂಬಂಧಿಯನ್ನು ನಿನ್ನೆಯೇ ಬಂಧಿಸಿದ್ದರು. ಸೋಮವಾರ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್.ಪಿ. ಹರಿರಾಂ ಶಂಕರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net