

ಮದ್ದೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗುರುವಾರ ವ್ಯಕ್ತಿಯೊಬ್ಬನನ್ನು ಅತನ ಪತ್ನಿ ಹಾಗೂ ಪುತ್ರ ಸೇರಿಕೊಂಡು ಕೊಲೆ ಮಾಡಿದ್ದಾರೆ.
ತಾಲೂಕಿನ ಚಾಪುರದೊಡ್ಡಿ ಗ್ರಾಮದ ಉಮೇಶ್ (50) ಎಂಬುವರೇ ಕೊಲೆಯಾದ ವ್ಯಕ್ತಿಯಾಗಿದ್ದು, ಇತನ ಪತ್ನಿ ಸವಿತಾ ಹಾಗೂ ಪುತ್ರ ಶಶಾಂಕ್ ಕೊಲೆ ಮಾಡಿದ ಆರೋಪಿಗಳು.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದಲೂ ಗಂಡ, ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕಳೆದ ಐದಾರು ತಿಂಗಳುಗಳ ಹಿಂದೆ ಸಹ ಜಗಳ ನಡೆದು ಪತ್ನಿ ಸವಿತಾ ಹಾಗೂ ಪುತ್ರ ಶಶಾಂಕ್ ಸೇರಿ ಉಮೇಶ್ ಅವರ ಕಾಲಿಗೆ ಹಲ್ಲೆಮಾಡಿದ್ದ ಪರಿಣಾಮ ಉಮೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಸಂಬಂಧಿಕರ ಸಹಾಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಪತ್ನಿ ಹಾಗೂ ಮಗ ಬೆಂಗಳೂರಿನಲ್ಲಿ ವಾಸವಾಗಿದ್ದರು.
ಚಾಪುರದೊಡ್ಡಿ ಗ್ರಾಮದಲ್ಲಿ ಶನಿವಾರ ಪಿತೃಪಕ್ಷ ಇರುವುದರಿಂದ ಪೂಜೆಯಲ್ಲಿ ಭಾಗಿಯಾಗಲು ಗುರುವಾರ ಪತ್ನಿ ಸವಿತಾ ಹಾಗೂ ಪುತ್ರ ಶಶಾಂಕ್ ಬಂದಿದ್ದರು ಎನ್ನಲಾಗಿದೆ.
ರಾತ್ರಿ ಸುಮಾರು 11.30 ರಲ್ಲಿ ಪತ್ನಿ ಸವಿತಾ ಹಾಗೂ ಪತಿ ಉಮೇಶ್ ನಡುವೆ ಜಗಳ ನಡೆದು ದೊಣ್ಣೆ ಹಾಗೂ ಮಚ್ಚುಗಳಿಂದ ಪತ್ನಿ ಹಾಗೂ ಮಗ ಇಬ್ಬರು ಉಮೇಶ್ ಮೇಲೆ ಹಲ್ಲೆ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಉಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸವಿತಾ ಹಾಗೂ ಶಶಾಂಕ್ ಸ್ಥಳದಿಂದ ಪರಾರಿಯಾಗಿದ್ದರು.
ಕೂಡಲೇ ಆರೋಪಿಗಳ ಬೆನ್ನತ್ತಿದ್ದ ಬೆಸಗರಹಳ್ಳಿ ಪೋಲೀಸ್ ಠಾಣೆಯ ಪಿಎಸ್‌ಐ ಮಲ್ಲಪ್ಪ ಹಾಗೂ ಸಿಬ್ಬಂದಿ ಆ ದಿನ ರಾತ್ರಿಯೇ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸವಿತಾ ಹಾಗೂ ಶಶಾಂಕ್‌ನನ್ನು ಬಂಧಿಸಿದರು.
ಕೊಲೆಯಾದ ಚಾಪುರದೊಡ್ಡಿ ಗ್ರಾಮದ ಉಮೇಶ್ ಮನೆಗೆ ಅಪರ ಜಿಲ್ಲಾಧಿಕಾರಿ ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ, ಮದ್ದೂರು ಗ್ರಾಮಾಂತರ ಸಿಪಿಐ ವೆಂಕಟೇಗೌಡ ಭೇಟಿ ನೀಡಿ ಮಹಜರು ನಡೆಸಿದ್ದರು. ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.