ಕಾರವಾರ:ಕಿರುಕುಳ ನೀಡಿ ಪತ್ನಿಯ ಆತ್ಮಹತ್ಯೆಗೆ ಕಾರಣನಾದ ವ್ಯಕ್ತಿಗೆ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ತಾವರೆಕೊಪ್ಪದ ನಾಗರಾಜ ಸಿ. ಎಂಬಾತನಿಗೆ 2 ವರ್ಷ ಜೈಲು ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿ ಶಿರಸಿಯ 1 ನೇ ಅಧಿಕ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಧೀಶ ವಿ.ಜಗದೀಶ ಅವರು ತೀರ್ಪು ಪ್ರಕಟಿಸಿದ್ದಾರೆ.
ಶಿರಸಿ ಬನವಾಸಿಯ ಗುಡ್ನಾಪುರದ ರಾಮ ಶಂಕರ ನಾಯ್ಕ ಅವರ ಪುತ್ರಿ ಜಯಮಾಲಾ ಎಂಬಾಕೆಯನ್ನು ನಾಗರಾಜ ಸಿ. 2014 ರಲ್ಲಿ ವಿವಾಹವಾಗಿದ್ದ. ಆದರೆ, ಆತ ಕಿರುಕುಳ ನೀಡುತ್ತಿದ್ದ ಕಾರಣ ಜಯಮಾಲಾ 2018 ರಲ್ಲಿ ತನ್ನ ತವರಿಗೆ ಬಂದು ವಾಸವಾಗಿದ್ದಳು. ಅದನ್ನೇ ಮನಸ್ಸಿಗೆ ಹಚ್ಚಿಕೊಂಡು 2018 ರ. ಮಾರ್ಚ್ ,25 ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿವಿಧ ಆಸ್ಪತ್ರೆಯಲ್ಲಿ ನೀಡಿದ ಶಿಕ್ಷೆಗೂ ಸ್ಪಂದಿಸದೇ ಮಾ.29 ರಂದು ಕೊನೆಯುಸಿರೆಳೆದಿದ್ದಳು. ಆಕೆಯ ಸಾವಿಗೆ ಪತಿಯ ಕಿರುಕುಳವೇ ಕಾರಣ ಎಂದು ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬನವಾಸಿ ಠಾಣೆಯ ಆಗಿನ ಪಿಎಸ್ ಐ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೇಶ ಎಂ. ಮಳಗೀಕರ್ ವಾದ ಮಂಡಿಸಿದ್ದರು.