ಪತ್ನಿ ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on

ಚಿತ್ರದುರ್ಗ: ಪತ್ನಿಯ ಶೀಲ ಶಂಕಿಸಿ ಕೊಲೆಗೈದ ಆರೋಪಿ ಪತಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ. ನಗರದ ಜೋಗೇಶ್ ಪಾಳ್ಯ ವಾಸಿ ಇಸ್ಮಾಯಿಲ್ ಜಬೀವುಲ್ಲಾ ಶಿಕ್ಷೆಗೊಳಗಾದ ಆರೋಪಿ.

ಘಟನೆ ಹಿನ್ನಲೆ: ಹೊರಪೇಟೆಯ ಬಡಾಮಕಾನ್ ಸಮೀಪದ ವಾಸಿ ಸೈಯದಾ ಮುಭಾರಕ್ ಉನ್ನೀಸಾರನ್ನು 10 ವರ್ಷಗಳ ಹಿಂದೆ ಆಟೋ ಚಾಲನೆ, ಟೈಲ್ಸ್ ಹಾಕುವ ವೃತ್ತಿಯಲ್ಲಿದ್ದ ಇಸ್ಮಾಯಿಲ್ ಜಬೀವುಲ್ಲಾ ವಿವಾಹವಾಗಿದ್ದ. ದಂಪತಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾಳೆ.

ಪತ್ನಿಯ ಶೀಲ ಶಂಕಿಸಿ ಆರೋಪಿ ಆಗಿಂದಾಗ್ಗೆ ಜಗಳ ಮಾಡುತ್ತಿದ್ದ. 2022ರ ಫೆ. 13ರಂದು ನಡೆದ ಕಲಹದ ವೇಳೆ ಮನೆಯಿಂದ ಓಡಿ ಹೋದರೂ, ಹಿಂಬಾಲಿಸಿಕೊಂಡು ಹೋಗಿ, ಸಿಮೆಂಟ್ ಇಟ್ಟಿಗೆಯಿಂದ ಮುಖಕ್ಕೆ ಎತ್ತಿ ಹಾಕಿ ಜಬೀವುಲ್ಲಾ ಪತ್ನಿಯನ್ನು ಕೊಲೆಗೈದಿದ್ದ. ಈ ಕುರಿತು ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನಂತರ ಆರೋಪ ಸಾಬೀತಾದ ಕಾರಣ ನ್ಯಾಯಾಧೀಶ ಶಂಕರಪ್ಪ ನಿಂಬಣ್ಣ ಕಲ್ಕನಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಆರೋಪಿ ಈಗಾಗಲೇ ಕಳೆದ 2.4 ವರ್ಷದಿಂದ ಜೈಲಿನಲ್ಲಿದ್ದು, ಶಿಕ್ಷೆ ಅನುಭವಿಸುತ್ತಿದ್ದಾನೆ. ಸರ್ಕಾರದಿಂದ ಸಿಗುವ ಪರಿಹಾರದ ಹಣದಲ್ಲಿ ಮೃತಳ ತಾಯಿ ಸೈಯದ್ ಅಕ್ತರುನ್ನೀಸಾ, ಮೂವರು ಮಕ್ಕಳಿಗೆ ನೀಡಲು ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಎನ್.ಎಸ್.ಮಲ್ಲಯ್ಯ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net