

ಹಾಸನ: ಮನೆಗೆ ಸಾಮಾಗ್ರಿ ತರಲಿಲ್ಲವಾ ಎಂದು ಕೇಳಿದ ಮಾತ್ರಕ್ಕೆ ಚಾಕುವಿನಿಂದ ಇರಿದು ಪತ್ನಿ ಕೊಲೆಗೆ ಯತ್ನಿಸಿದ ಪತಿಗೆ ಜಿಲ್ಲಾ 2ನೇ ಅಪರ ಮತ್ತು ಸತ್ರ ನ್ಯಾಯಾಧೀಶ ಎಸ್.ಎ.ಹಿದಾಯತ್ ಉಲ್ಲಾ ಷರೀಫ್ ಅವರು ನಾಲ್ಕೂವರೆ ವರ್ಷ ಕಾರಾಗೃಹ ಶಿಕ್ಷೆ ಹಾಗು 12 ಸಾವಿರ ರೂ. ದಂಡ ಮತ್ತು 2 ಲಕ್ಷ ರೂ. ಪರಿಹಾರವನ್ನು ಪತ್ನಿಗೆ ನೀಡುವಂತೆ ಆದೇಶಿಸಿದ್ದಾರೆ.
ಬೇಲೂರು ಪಟ್ಟಣದ ಶಿವಜ್ಯೋತಿ ನಗರ ನಿವಾಸಿ ಪಾಜಿಲ್ ಅಹಮದ್ ಅಪರಾಧಿ. ಪತ್ನಿ ರಜಿಯಾ ಬಾನು ಅವರಿಗೆ ಪತಿ ಪಾಜಿಲ್ ನಿರಂತರ ಮಾನಸಿಕ ಹಾಗು ದೈಹಿಕ ಕಿರುಕುಳ ನೀಡುತ್ತಿದ್ದ. 2016 ಸೆ. 16 ರಂದು ಮನೆಗೆ ಬಂದ ಪತಿಯನ್ನು ಉದ್ದೇಶಿಸಿ ಸಾಮಾಗ್ರಿ ತರಲಿಲ್ಲವಾ ಎಂದು ರಜಿಯಾ ಬಾನು ಕೇಳಿದ್ದರು. ಅಷ್ಟಕ್ಕೆ ಕೋಪಗೊಂಡ ಪಾಜಿಲ್ ಅಹಮದ್, ಪತ್ನಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಹೊಟ್ಟೆ ಹಾಗು ಬಲಗೈ ರಟ್ಟೆಗೆ ಇರಿದಿದ್ದನು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬೇಲೂರು ಠಾಣೆ ಪೊಲೀಸರು ಐಪಿಸಿ ಕಲಂ 498(ಎ), 307 ಹಾಗು 504, 326ರ ಅಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ನ. 20ರಂದು ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಕೆ.ಎಸ್.ನಾಗೇಂದ್ರ ವಾದ ಮಂಡಿಸಿದರು.