

ಚಾಮರಾಜನಗರ: ಸಂಸಾರದ ಕಲಹವನ್ನು ಬಗೆಹರಿಸಿಕೊಳ್ಳಲು ಪೊಲೀಸ್ ಠಾಣೆಗೆ ಬಂದು ಹೋಗುತ್ತಿದ್ದ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಪತಿಯ ಬಂಧನವಾಗಿದೆ.
ನಗರದ ಸೋಮವಾರಪೇಟೆ ನಿವಾಸಿ ಗಿರೀಶ್ (34) ಬಂಧಿತ ಆರೋಪಿ. ಈತ ತನ್ನ ಪತ್ನಿ ವಿದ್ಯಾ(30) ಮೇಲೆ ಮಂಗಳವಾರ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ. ಸೆರೆ ಹಿಡಿಯುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿಶೇಷವಾಗಿ ತಂಡ ರಚನೆ ಮಾಡಲಾಗಿತ್ತು. ಗಿರೀಶ್‌ನನ್ನು ಹುಡುಕುತ್ತಿದ್ದ ಪೊಲೀಸರಿಗೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ತೋಟದ ಮನೆಯಲ್ಲಿ ಇದ್ದ ಮಾಹಿತಿ ತಿಳಿದು ಬಂಧಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಂಡಿದ್ದಾರೆ.