ಚಾಮರಾಜನಗರ: ಸಂಸಾರದ ಕಲಹವನ್ನು ಬಗೆಹರಿಸಿಕೊಳ್ಳಲು ಪೊಲೀಸ್ ಠಾಣೆಗೆ ಬಂದು ಹೋಗುತ್ತಿದ್ದ ಪತ್ನಿಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಪತಿಯ ಬಂಧನವಾಗಿದೆ.
ನಗರದ ಸೋಮವಾರಪೇಟೆ ನಿವಾಸಿ ಗಿರೀಶ್ (34) ಬಂಧಿತ ಆರೋಪಿ. ಈತ ತನ್ನ ಪತ್ನಿ ವಿದ್ಯಾ(30) ಮೇಲೆ ಮಂಗಳವಾರ ಮಾರಾಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ. ಸೆರೆ ಹಿಡಿಯುವ ಸಲುವಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ವಿಶೇಷವಾಗಿ ತಂಡ ರಚನೆ ಮಾಡಲಾಗಿತ್ತು. ಗಿರೀಶ್‌ನನ್ನು ಹುಡುಕುತ್ತಿದ್ದ ಪೊಲೀಸರಿಗೆ ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರ ತೋಟದ ಮನೆಯಲ್ಲಿ ಇದ್ದ ಮಾಹಿತಿ ತಿಳಿದು ಬಂಧಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಂಡಿದ್ದಾರೆ.
ಏನಿದು ಘಟನೆ?: ಗಂಡ-ಹೆಂಡತಿ ನಡುವೆ ಮತ್ತೊಬ್ಬನ ಆಗಮನವಾಗಿ ಗಲಾಟೆ ನಡೆದಿತ್ತು. ಈ ವಿಷಯ ಪೊಲೀಸ್ ಠಾಣೆ ಮೇಟ್ಟಿಲೇರಿತ್ತು. ವಿದ್ಯಾ ಸ್ವಧಾರ ಗೃಹದಲ್ಲಿ ಇದ್ದಳು. ಈ ವಿಚಾರವಾಗಿ ಗಿರೀಶ್ ಮಾನಸಿಕವಾಗಿ ಸಾಕಷ್ಟು ನೊಂದು ಗಲಾಟೆ ಮಾಡಿದ್ದ. ಪಟ್ಟಣ ಠಾಣೆ ಪೊಲೀಸರು ಗಂಡ-ಹೆಂಡತಿಗೆ ಬುದ್ಧಿವಾದ ಹೇಳಿ ಕಳುಹಿಸಿಕೊಟ್ಟಿದ್ದರು. ಆದರೆ ಪೊಲೀಸ್ ಠಾಣೆಯಿಂದ ಬಂದ ಬಳಿಕ ಆರೋಪಿ ಗಿರೀಶ್ ಮಚ್ಚಿನಿಂದ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ತೀವ್ರ ರಕ್ತಸ್ರಾವದಿಂದ ವಿದ್ಯಾ ಮೃತಪಟ್ಟಳು. ಗಿರೀಶ್ ಸ್ಥಳದಿಂದ ಪರಾರಿಯಾಗಿದ್ದನು.