ಪತ್ನಿ ಕೊಂದಿದ್ದ ಪತಿ ಪೊಲೀಸ್ ಬಲೆಗೆ

18 mlv 3 mahadevaswamy
Published on

ಮಳವಳ್ಳಿ: ತಾಲೂಕಿನ ಬಿಳಿಜಗುಲಿ ಮೋಳೆ ಗ್ರಾಮದಲ್ಲಿ ಡಿ.11ರಂದು ನಡೆದಿದ್ದ ಮಹಿಳೆಯ ಅನುಮಾನಾಸ್ಪದ ಸಾವು ಪ್ರಕರಣವನ್ನು ಬೆಳಕವಾಡಿ ಪೊಲೀಸರು ಭೇದಿಸಿದ್ದು, ಆರೋಪಿಯನ್ನು ಇತ್ತೀಚೆಗೆ ಬಂಧಿಸಿದ್ದಾರೆ.

ಗ್ರಾಮದ ಸುಮತಿ (38) ಕೊಲೆಯಾಗಿದ್ದ ಮಹಿಳೆ. ಈಕೆಯ ಪತಿ ಮಹಾದೇವಸ್ವಾಮಿ ಎಂಬಾತನನ್ನು ಕೊಲೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.

ಜಮೀನಿನ ಬಳಿ ಸುಮತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಿ ಆಕೆಯ ಪತಿ ಮಹಾದೇವಸ್ವಾಮಿ ಹಾಗೂ ಮೈದುನ ರಾಚಶೆಟ್ಟಿ ಗ್ರಾಮಕ್ಕೆ ಶವವನ್ನು ತಂದಿದ್ದರು. ಈ ನಡುವೆ, ಸಾವಿನ ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ್ದ ಮೃತಳ ಸಹೋದರಿ ಮಹಾದೇವಮ್ಮ, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಅನುಮಾನ ವ್ಯಕ್ತಪಡಿಸಿ ಬೆಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಬಳಿಕ ಗ್ರಾಮಕ್ಕೆ ಆಗಮಿಸಿದ್ದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಮರೋಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದರು. ಕೆಲ ದಿನಗಳ ನಂತರ ಬಂದ ಮರೋಣೋತ್ತರ ಪರೀಕ್ಷೆಯ ವರದಿಯಲ್ಲಿ ಕೊಲೆ ಎಂಬುದು ಸಾಬೀತಾದ ಹಿನ್ನೆಲೆಯಲ್ಲಿ ಡಿವೈಎಸ್‌ಪಿ ನವೀನ್‌ಕುಮಾರ್ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಧರ್, ಪಿಎಸ್‌ಐ ಅಶೋಕ್ ಅವರು, ಮಹಾದೇವಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದರು. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಆಕೆಯನ್ನು ತಾನು ಮತ್ತು ತನ್ನ ತಮ್ಮ ಸೇರಿಕೊಂಡು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡಿರುವ ರಾಚಶೆಟ್ಟಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net