ಪತ್ನಿ ಕಿರುಕುಳ; ವಿಷ ಸೇವಿಸಿ ಪತಿ ಆತ್ಮಹತ್ಯೆ

images
ಸಾಂದರ್ಭಿಕ ಚಿತ್ರ.
Published on

ಹಾಸನ: ಪತ್ನಿ ಹಾಗೂ ಅವರ ಪೋಷಕರ ಕಿರುಕುಳದಿಂದ ಮನನೊಂದ ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹೊಳೆನರಸೀಪುರ ತಾಲೂಕು ಕಸಬಾ ಹೋಬಳಿ ಮಾರಗೋಡನಹಳ್ಳಿ ಗ್ರಾಮದ ವಾಸಿಯಾದ ದಿ. ಬೋರೇಗೌಡರ ಹಿರಿಯ ಮಗನಾದ ವಿನಯ್ (33) ಮೃತಪಟ್ಟ ದುರ್ದೈವಿ.


ವಿನಯ್‌ಗೆ ಅರಕಲಗೂಡು ತಾಲ್ಲೂಕು ಗಂಜಲಗೂಡು ಗ್ರಾಮದ ರತ್ನಮ್ಮ ಮತ್ತು ರಾಜೇಗೌಡರ ಮಗಳು ಆಶಾ ಅವರೊಂದಿಗೆ 2011ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಶಾಗೆ ಬಿಎಂಟಿಸಿಯಲ್ಲಿ ಮೆಕ್ಯಾನಿಕ್ ಕೆಲಸ ಸಿಕ್ಕಿದ್ದರಿಂದ ಗಂಡ-ಹೆಂಡತಿ ಇಬ್ಬರೂ ಬೆಂಗಳೂರಿನಲ್ಲಿ ವಾಸವಾಗಿದ್ದರು. ಬೆಂಗಳೂರುನಲ್ಲಿ ಇದ್ದ ಸಮಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ವಿನಯ್‌ಗೆ ಆಶಾ ‘ನೀನು ಅವಿದ್ಯಾವಂತ. ನಾನು ಸರ್ಕಾರಿ ನೌಕರಳು,’ ಎಂದು ಹೀಯಾಳಿಸುತ್ತಾ, ಗಂಡನನ್ನು ಕೀಳಾಗಿ ಕಾಣುತ್ತಿದ್ದರು. ಕಳೆದ 2ವರ್ಷಗಳ ಹಿಂದೆ ಬೆಂಗಳೂರಿನಿಂದ ಹಾಸನಕ್ಕೆ ವರ್ಗಾವಣೆ ಮಾಡಿಕೊಂಡು ಬಂದು ದಂಪತಿ ಹಾಸನದ ದೊಡ್ಡಮಂಡಿಗನಹಳ್ಳಿಯಲ್ಲಿ ವಾಸವಾಗಿದ್ದರು.


ಕಳೆದ 6 ತಿಂಗಳಿನಿಂದ ಆಶಾ ಮತ್ತೆ ವಿನಯ್‌ಗೆ ಮಾನಸಿಕವಾಗಿ ಹಿಂಸೆ ನೀಡುತ್ತಾ, ‘ನೀನು ಅವಿದ್ಯಾವಂತ, ನಿಮ್ಮ ಅಪ್ಪನ ಆಸ್ತಿ ಬರೆಸಿಕೊಡು,’ ಎಂದು ಆಶಾಳ ತಾಯಿ ರತ್ನಮ್ಮ, ಅಕ್ಕ ಉಷಾ, ಉಷಾಳ ಗಂಡ ಸತೀಶ, ಆಶಾಳ ದೊಡ್ಡಮ್ಮ ಶಿವಮ್ಮ, ಸೋದರ ಮಾವಂದಿರಾದ ರಮೇಶ ಮತ್ತು ಪ್ರಕಾಶ ಎಂಬುವವರು ವಿನಯ್‌ಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಾ ಬಂದಿದ್ದಾರೆ. ಜು.9ರಂದು ಎಲ್ಲರೂ ಸೇರಿಕೊಂಡು ವಿನಯ್‌ಗೆ ಕೆಟ್ಟಪದಗಳಿಂದ ಬೈಯ್ದು, ಹಲ್ಲೆ ಮಾಡಿ, ಜೀವ ಬೆದರಿಕೆ ಕೂಡ ಹಾಕಿ, ವರದಕ್ಷಿಣೆ ಕೇಸ್ ದಾಖಲಿಸಿ ಜೈಲಿಗೆ ಹಾಕಿಸುವುದಾಗಿ ಹೆದರಿಸಿದ್ದಾರೆ. ಇದರಿಂದ ಮನನೊಂದು ವಿನಯ್ ಅದೇ ದಿನ ಮಧ್ಯಾಹ್ನ ಮನೆಯಿಂದ ಹೊರಟು ಹಾಸನದ ಹೊರವಲಯದ ಹನುಮಂತಪುರದ ಸಮೀಪ ಇರುವ ವಿದ್ಯಾಸೌಧ ಶಾಲೆಯ ಹತ್ತಿರ ಹೋಗಿ ಕರೆ ಮಾಡಿ, ನಾನು ವಿಷ ಕುಡಿಯುತ್ತಿದ್ದೇನೆಂದು ತಿಳಿಸಿ, ವಿಷ ಕುಡಿದು ವೀಡಿಯೋ ಮಾಡಿದ್ದಾರೆ.


‘ನನ್ನ ಸಾವಿಗೆ ನನ್ನ ಪತ್ನಿ ಆಶಾ, ಅತ್ತೆ ರತ್ನಮ್ಮ, ಆಶಾ ಅಕ್ಕ ಉಷಾ ಹಾಗೂ ಅವರ ಕುಟುಂಬದವರೇ ಕಾರಣ. ನನಗೆ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೇನೆ. ಆದರೂ ಅವರೆಲ್ಲಾ ಬದಲಾಗಲಿಲ್ಲ. ನನ್ನ ಪತ್ನಿ ಆಶಾ ಹಾಗೂ ಕುಟುಂಬಸ್ಥರ ಕಿರುಕುಳದಿಂದ ಮನನೊಂದು ವಿಷ ಸೇವಿಸುತ್ತಿದ್ದೇನೆ. ಅಕ್ಕ, ಅಮ್ಮ, ಭಾವ ನನ್ನನ್ನು ಕ್ಷಮಿಸಿಬಿಡಿ, ಆಶಾ ಹಾಗೂ ಅವರ ಪೋಷಕರಿಗೆ ತಕ್ಕ ಶಿಕ್ಷೆಯಾಗಬೇಕು. ದೇವರೇ ಅವರನ್ನು ನೀನೇ ನೋಡಿಕೋ,’ ಎಂದು ವಿಡಿಯೋದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.


ವಿಡಿಯೋ ನೋಡಿ ವಿನಯ್ ಪೋಷಕರು ಸ್ಥಳಕ್ಕೆ ತೆರಳಿ ವಿನಯ್‌ನನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಸುಮಾರು 9.20ರ ಸಮಯದಲ್ಲಿ ವಿನಯ್ ಮೃತಪಟ್ಟಿದ್ದಾರೆ. ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಬುಧವಾರ ವಿನಯ್ ಸಂಬಂಧಿಕರು ನೀಡಿದ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net