ಪತ್ನಿ ಕಿರುಕುಳ ತಾಳಲಾರದೆ ಪತಿ ಆತ್ಮಹತ್ಯೆ

suicide
Published on

ಹಾಸನ: ಪತ್ನಿ ಹಾಗೂ ಪತ್ನಿಯ ಮನೆಯವರು ನೀಡಿದ ಮಾನಸಿಕ ಕಿರುಕುಳ ತಾಳಲಾರದೆ ಮನನೊಂದು ಪತಿ ಶುಕ್ರವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚನ್ನರಾಯಪಟ್ಟಣ ತಾಲೂಕು ದಂಡಿಗಾನಹಳ್ಳಿ ಹೋಬಳಿಯ ಬೀರೂರು ಗ್ರಾಮದ ಬಿ.ಎಸ್. ರಾಜೇಶ್ (31) ಮೃತ ಪತಿ. ರಾಜೇಶ್ ಅವರಿಗೆ ಎರಡು ವರ್ಷಗಳ ಹಿಂದೆ ಮೈಸೂರು ಜಿಲ್ಲೆ ವರುಣಾ ಹೋಬಳಿಯ ವರಕೋಡು ಗ್ರಾಮದ ಸ್ಪಂದನಾ ಎಂಬುವವರ ಜತೆ ವಿವಾಹ ಮಾಡಿಕೊಡಲಾಗಿತ್ತು. ಮದುವೆಯಾದ ಒಂದು ವರ್ಷ ಇಬ್ಬರು ಅನ್ಯೋನ್ಯವಾಗಿದ್ದರು. ನಂತರದ ದಿನಗಳಲ್ಲಿ ಪತ್ನಿ ಸ್ಪಂದನಾ ‘ನಿಮ್ಮ ತಂದೆಯ ಹೆಸರಿನ ಆಸ್ತಿಯನ್ನು ನನ್ನ ಹೆಸರಿಗೆ ಬರೆಸಿಕೊಡು,’ ಎಂದು ಪತಿಯೊಂದಿಗೆ ಜಗಳ ಆಡುತ್ತಿದ್ದಳು.

ಅಲ್ಲದೇ ಜಗಳವಾದಗಲೆಲ್ಲಾ ತವರು ಮನೆಗೆ ತಂದೆ ಕೃಷ್ಣೇಗೌಡ ತಾಯಿ ಪ್ರಮೀಳಾ ಹಾಗೂ ತಮ್ಮ ಸಂದೇಶ ಜತೆಗೆ ಊರಿಗೆ ಬಂದು ಬಾಯಿಗೆ ಬಂದ ಹಾಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ‘ಭೂಮಿಗೆ ಭಾರ, ಉಪಯೋಗಕ್ಕೆ ಬಾರದವನು, ಎಲ್ಲಾದರೂ ಹೋಗಿ ವಿಷ ಕುಡಿದು ಸಾಯಿ, ನೇಣು ಹಾಕಿಕೊಂಡು ಸಾಯಿ’ ಎಂದು ಬೈದು ಮನಸ್ಸಿಗೆ ನೋವುಂಟು ಮಾಡಿದ್ದರಿಂದ ಕಳೆದ ಡಿ.14ರಂದು ರಾಜೇಶ್ ವಿಷ ಸೇವನೆ ಮಾಡಿ ಸಾಯಲು ಪ್ರಯತ್ನಿಸಿದ್ದರು. ಅದೃಷ್ಟವಶಾತ್ ಪ್ರಾಣಕ್ಕೆ ಯಾವುದೇ ಅಪಾಯವಾಗಿರಲಿಲ್ಲ. ಇದೀಗ ಇದೇ ವಿಚಾರವಾಗಿ ಮಾನಸಿಕವಾಗಿ ಮನನೊಂದು ರಾಜೇಶ್ ತನ್ನ ಹೆಂಡತಿಯ ಕಿರುಕುಳ ತಾಳಲಾರದೆ ಶುಕ್ರವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತನ ತಂದೆ ಬಿ.ಎಚ್.ಸ್ವಾಮಿಗೌಡ ಅವರು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net