ಪತ್ನಿ ಕತ್ತು ಸೀಳಿ ಕೊಲೆ

Published on

ಮಂಡ್ಯ: ಪಾಂಡವಪುರ ತಾಲೂಕಿನ ಹುಲ್ಕೆರೆ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ವ್ಯಕ್ತಿಯೊಬ್ಬ ತನ್ನ ಪತ್ನಿ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಸೌಮ್ಯಾ (23) ಕೊಲೆಯಾದ ಗೃಹಿಣಿ. ಆರೋಪಿ ಪತಿ ಎಚ್.ಪಿ.ಗಣೇಶ(33) ಘಟನೆ ಬಳಿಕ ತಲೆಮರೆಸಿಕೊಂಡಿದ್ದಾನೆ. ನಂಜನಗೂಡು ತಾಲೂಕಿನ ಕೊಂಗಹಳ್ಳಿ ಗ್ರಾಮದ ಸೌಮ್ಯಾ ಅವರನ್ನು ಆರು ವರ್ಷಗಳ ಹಿಂದೆ ಹುಲ್ಕೆರೆ ಗ್ರಾಮದ ಗಣೇಶನ ಜತೆ ವಿವಾಹ ಮಾಡಿಕೊಡಲಾಗಿತ್ತು. ಇವರಿಗೆ ನಾಲ್ಕು ವರ್ಷದ ಪುತ್ರ ಇದ್ದು, ಕೌಟುಂಬಿಕ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ.

ಸೋಮವಾರವೂ ಯಾವುದೋ ವಿಚಾರವಾಗಿ ಗಂಡ, ಹೆಂಡತಿ ನಡುವೆ ಜಗಳ ನಡೆದಿದ್ದು, ಈ ವೇಳೆ ಕುಪಿತನಾದ ಗಣೇಶ ಕಬ್ಬಿಣದ ಆಯುಧದಿಂದ ಸೌಮ್ಯಾ ಅವರ ಕತ್ತು ಸೀಳಿದ್ದಾನೆ. ನಂತರ ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆ ವೇಳೆ ಪುತ್ರ ಅಂಗನವಾಡಿ ಕೇಂದ್ರಕ್ಕೆ ಕಳುಹಿಸಲಾಗಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸೌಮ್ಯಾ ಶವವನ್ನು ನೋಡಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ವಿಚಾರ ತಿಳಿಸಿದರು. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ನಾಪತ್ತೆ ಆಗಿರುವ ಪತಿ ಗಣೇಶನಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net