

ಧಾರವಾಡ: ಕುಡಿದ ಮತ್ತಿನಲ್ಲಿದ್ದ ಪತಿ ತನ್ನ ಪತ್ನಿಯನ್ನು ಕೊಲೆ ಮಾಡಿದ ಘಟನೆ ನಗರದ ಕೋಳಿಕೆರೆ ಬಡಾವಣೆಯಲ್ಲಿ ಗುರುವಾರ ನಡೆದಿದೆ. ಮಂಜವ್ವ ಪಠಾದ (೪೨) ಕೊಲೆಯಾದ ಮಹಿಳೆ. ಆರೋಪಿ ಗದಿಗೆಪ್ಪ ಪರಾರಿಯಾಗಿದ್ದಾನೆ. ಈತ ಮೂಲತಃ ತಾಲೂಕಿನ ಯಾದವಾಡ ಗ್ರಾಮದವನು. ತನ್ನ ಊರಿನಲ್ಲಿ ನಡೆದ ಅಪರಾಧ ಪ್ರಕರಣದಲ್ಲಿ ೧೪ ವರ್ಷ ಜೈಲುಶಿಕ್ಷೆ ಅನುಭವಿಸಿ ೨ ತಿಂಗಳ ಹಿಂದೆ ಬಿಡುಗಡೆಯಾಗಿದ್ದ. ತವರು ಮನೆಯಲ್ಲಿದ್ದ ಪತ್ನಿಯ ಜೊತೆ ಕುಡಿದ ಅಮಲಿನಲ್ಲಿ ನಿತ್ಯವೂ ಜಗಳವಾಡುತ್ತಿದ್ದ ಎನ್ನಲಾಗಿದೆ. ಜಗಳ ವಿಕೋಪಕ್ಕೆ ಹೋಗಿ ಗದಿಗೆಪ್ಪ ಕಲ್ಲಿನಿಂದ ಮಂಜವ್ವಳ ತಲೆಗೆ ಜಜ್ಜಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಶಹರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಆರೋಪಿ ಗದಿಗೆಪ್ಪನ ಪತ್ತೆಗೆ ಜಾಲ ಬೀಸಿದ್ದಾರೆ.