ಪತಿಯನ್ನೇ ಹತ್ಯೆಗೈದ ಪತ್ನಿ

19ark-4
Published on


ಹಾಸನ : ಅರಕಲಗೂಡು ತಾಲೂಕಿನ ನೇರಲಹಳ್ಳಿ ಗ್ರಾಮದಲ್ಲಿ ಹೆಂಡತಿಯೇ ತನ್ನ ಗಂಡನನ್ನು ಕೊಲೆ ಮಾಡಿ ಮನೆಯ ಶೌಚಗುಂಡಿಯಲ್ಲಿ ಹೂತಿಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕೃಷ್ಣೇಗೌಡ (50) ಕೊಲೆಯಾದ ವ್ಯಕ್ತಿ. ಈತನ ಪತ್ನಿ ನೀಲಮ್ಮ (46)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಕೃಷ್ಣೇಗೌಡ ಕೆಲ ದಿನಗಳ ಹಿಂದೆ ಮನೆಯಲ್ಲಿದ್ದ ಒಡವೆಗಳನ್ನು ಮದ್ಯ ಸೇವಿಸಲು ಮಾರಾಟ ಮಾಡಿಕೊಂಡಿದ್ದ ಎನ್ನಲಾಗಿದೆ. ಈ ಬಗ್ಗೆ ಮನೆಯಲ್ಲಿ ಗಂಡ, ಹೆಂಡತಿ ನಡುವೆ ಗಲಾಟೆ ನಡೆದಿದೆ. ಕಳೆದ ಸೋಮವಾರ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಪತ್ನಿ ನೀಲಮ್ಮ ದೊಣ್ಣೆಯಿಂದ ತನ್ನ ಗಂಡನಿಗೆ ಹೊಡೆದು ಕೊಲೆ ಮಾಡಿದ್ದಾಳೆ.


ಶವವನ್ನು ಮನೆಯ ಹಿಂಭಾಗದಲ್ಲಿ ಹಾದು ಹೋಗಿರುವ ಹೇಮಾವತಿ ನಾಲೆಗೆ ಎಸೆಯಲು ತೆಗೆದುಕೊಂಡು ಹೋದ ಸಮಯದೊಳಗೆ ನಾಲೆಯ ನೀರನ್ನು ನಿಲ್ಲಿಸಿದ ಕಾರಣ ಶವವನ್ನು ವಾಪಸ್ ತಂದು ಮನೆಯ ಹಿಂಬದಿಯ ಜೋಳದ ಹೊಲದಲ್ಲಿ ಇಟ್ಟಿದ್ದಳು. ನಂತರ ಬೆಳಗಿನ ಜಾವ ಮನೆಯ ಹಿಂಬದಿಯ ಹಿತ್ತಲಿನ ಶೌಚಗುಂಡಿಯಲ್ಲಿ ಹೂತಿಟ್ಟಿದ್ದಳು.


ಬುಧವಾರ ಬೆಳಗ್ಗೆ ಗ್ರಾಮಸ್ಥರು ಕೃಷ್ಣೇಗೌಡನನ್ನು ಹುಡುಕಿಕೊಂಡು ಮನೆಗೆ ತೆರಳಿ ನೀಲಮ್ಮನನ್ನು ವಿಚಾರಿಸಿದಾಗ, ಕೃಷ್ಣೇಗೌಡ ಊರಿಗೆ ಹೋಗಿದ್ದಾರೆ ಎಂದು ಹೇಳಿದ್ದಾಳೆ. ಆದರೆ ನೆರೆಮನೆಯ ವ್ಯಕ್ತಿಯೊಬ್ಬ ನೀಲಮ್ಮ ಗುಂಡಿ ತೆಗೆದು ಹೂಳುವುದನ್ನು ನೋಡಿದ್ದ. ಇದನ್ನು ಊರಿನ ಜನರಿಗೆ ತಿಳಿಸಿದ್ದಾನೆ.


ಗ್ರಾಮಸ್ಥರು ಅನುಮಾನಗೊಂಡು ನೀಲಮ್ಮನನ್ನು ವಿಚಾರಿಸಿದಾಗ ನಿಜ ಸಂಗತಿಯನ್ನು ಬಾಯಿಬಿಟ್ಟಿದ್ದಾಳೆ. ಗ್ರಾಮಸ್ಥರು ಅರಕಲಗೂಡು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಆಗಮಿಸಿ ಆಕೆಯನ್ನು ವಶಕ್ಕೆ ಪಡೆದರು. ಸಬ್ ಇನ್ಸ್‌ಪೆಕ್ಟರ್ ಧನರಾಜ್, ಸಿಪಿಐ ರಘುಪತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net