ಪತಿಯ ಕೃಷಿಗೆ ಸಾವಯವ ‘ರೂಪ’

15rajesh3
Published on

ಚಾಮರಾಜನಗರ: ರಾಸಾಯನಿಕ ಬಳಸಿ ಕೃಷಿ ಮಾಡುತ್ತಿದ್ದ ಪತಿಗೆ ವಿಷ ಮುಕ್ತ ಆಹಾರದ ಮಹತ್ವ ಸಾರಿದ ಪತ್ನಿ ಸಾವಯವ ಕೃಷಿಗೆ ವಿಶೇಷ ‘ರೂಪ’ ಕೊಟ್ಟಿದ್ದಾರೆ.

ತಾಲೂಕಿನ ಕಲ್ಪುರ(ಗೋವಿಂದವಾಡಿ) ಗ್ರಾಮದ ಮಹೇಶ್‌ಗೆ ಪತ್ನಿ ರೂಪಾ ಸಾವಯವ ವಿಧಾನದಲ್ಲಿ ಕೃಷಿ ಮಾಡಲು ಪ್ರೇರಣೆ ನೀಡಿ ಜತೆ ನಿಂತು ಸಾಥ್ ಕೊಡುತ್ತಿದ್ದಾರೆ. ಕಾಳನಹುಂಡಿ ವೃತ್ತದಿಂದ ನಂಜದೇನವಪುರ ಗ್ರಾಮಕ್ಕೆ ಹೋಗುವ ದಾರಿಯಲ್ಲಿ 3 ಎಕರೆ ಜಮೀನಿದೆ. ಮಹೇಶ್‌ಗೆ ಕೃಷಿಯೇ ಮೂಲ ವೃತ್ತಿ. ಕಳೆದ 20 ವರ್ಷಗಳಿಂದ ವ್ಯವಸಾಯ ಮಾಡುತ್ತಿರುವ ಮಹೇಶ್ ರಾಸಾಯನಿಕ ಬಳಕೆ ಮಾಡಿ ಕೃಷಿ ಮಾಡುತ್ತಿದ್ದರು. ಆದರೆ ಇವರ ಪತ್ನಿ ರೂಪಾ ಬಸವ ತತ್ವದ ಅಪ್ಪಟ ಅನುಯಾಯಿ. ವಿಷ ಮುಕ್ತ ಆಹಾರ ಬೆಳೆಯಬೇಕೆಂದು ಸಂಕಲ್ಪ ತೊಟ್ಟು ಪತಿಯ ಮನಪರಿವರ್ತನೆ ಮಾಡಲು ಮುಂದಾದರು. ಒಪ್ಪದೆ ಇದ್ದಾಗ ಈಗ ಇಂಜಿನಿಯರಿಂಗ್ ಮಾಡುತ್ತಿರುವ ಮಗಳು ನಿಸರ್ಗ ಸಹಾಯ ಪಡೆದು ಸಾವಯವ ಪದ್ಧತಿಯಲ್ಲಿ ನೇಂದ್ರ ಬಾಳೆ ಬೆಳೆದು ತೋರಿಸಿದರು. ಇದರಿಂದ ಮಹೇಶ್ ಪ್ರೇರಣೆಗೊಂಡರು. ಈಗ 2 ವರ್ಷಗಳಿಂದ ಸಾವಯವ ವಿಧಾನದಲ್ಲಿ ರೈತ ದಂಪತಿ ವ್ಯವಸಾಯ ಮಾಡುತ್ತಿದ್ದಾರೆ.

ವಿವಿಧ ಬೆಳೆಗಳ ಕೂಟ:

ರೂಪಾ ಮತ್ತು ಮಹೇಶ್ 3 ಎಕರೆ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆದಿದ್ದಾರೆ. 140 ತೆಂಗು, 1200 ಕಟ್ಟೆ ಬಾಳೆ, 3000 ಟಮೋಟೊ ಗಿಡ, 15 ಗೆಣಸಿನ ಗಿಡ, 10 ನುಗ್ಗೆ ಸಸಿ, 8 ಮಾವು, ಮೇವಿನ ಹುಲ್ಲು, 2 ಬೆಣ್ಣೆ ಹಣ್ಣಿನ ಗಿಡ, 5-6 ಅಡಿಕೆ ಗಿಡಗಳು, ಸಪೋಟ, ಮೆಣಸಿನ ಕಾಯಿ ಗಿಡಗಳನ್ನು ಹಾಕಿದ್ದಾರೆ. 1 ಬೋರ್‌ವೆಲ್ ಇದ್ದು, ಇದರ ಮೂಲಕ ಗಿಡಗಳಿಗೆ ಹನಿ ನೀರಾವರಿ ಮತ್ತು ತೆಂಗಿಗೆ ನೀರು ಕಟ್ಟುವ ವಿಧಾನದಲ್ಲಿ ಜಲ ನೀಡುತ್ತಿದ್ದಾರೆ. ಎಲ್ಲ ಗಿಡಗಳು ಉತ್ತಮವಾಗಿ ಬೆಳೆಯುತ್ತಿವೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಬಾಳೆ ಸಲು ಕೊಡುವ ಹಂತದಲ್ಲಿವೆ. ಇದಕ್ಕೆಲ್ಲ ಸಾವಯವ ವಿಧಾನದಲ್ಲಿ ಗೊಬ್ಬರ, ದ್ರಾವಣ ನೀಡುತ್ತಿದ್ದಾರೆ. 3 ಹಸುಗಳನ್ನು ಸಾಕುತ್ತಿದ್ದಾರೆ. ಜಮೀನಿನಲ್ಲಿ ಬೆಳೆದ ಕಳೆ ಸಸ್ಯಗಳನ್ನು ಕಿತ್ತು ಅಲ್ಲೇ ಕೊಳೆಸುತ್ತಾರೆ.

ರೂಪುಗೊಳ್ಳುತ್ತಿರುವ ಬೆಳೆಗಳು: ರೈತ ಮಹಿಳೆ ರೂಪಾ ಸಾವಯವ ವಿಧಾನದಲ್ಲಿ ಬೆಳಗಳನ್ನು ಪೋಷಿಸುತ್ತಿದ್ದಾರೆ. ಇಕ್ರಾ ಸಂಸ್ಥೆಯ ಶಿವಲಿಂಗೇಗೌಡರ ಮಾರ್ಗದರ್ಶನದಲ್ಲಿ ಸಾವಯವ ವಿಧಾನದಲ್ಲಿ ಕೃಷಿ ಮಾಡುವ ಕುರಿತು ತಿಳಿದುಕೊಂಡಿದ್ದಾರೆ. ಅಲ್ಲದೇ, ಸ್ವ ಆಸಕ್ತಿಯ ಮೇರೆಗೆ ಯೂಟ್ಯೂಬ್ ವಿಡಿಯೋಗಳಲ್ಲಿ ಸಿಗುವ ಮಾಹಿತಿಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಬೆಳೆಗಳಿಗೆ ನೀಡುವ ಗೊಬ್ಬರ, ದ್ರಾವಣಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಸಗಣಿ, ಗಂಜಲ, ಬೆಲ್ಲ, ಕೊಳೆತ ಹಣ್ಣು, ಕಡಲೆ ಹಿಟ್ಟು ಇನ್ನಿತರೆ ಪದಾರ್ಥಗಳನ್ನು ಹಾಕಿ ಡ್ರಮ್‌ನಲ್ಲಿ ಕೊಳೆಸಿ 15 ದಿನಗಳ ಬಳಿಕ ಬೆಳೆಗಳಿಗೆ ಹಾಕುತ್ತಿದ್ದಾರೆ. ಗೋ ಕೃಪಾಮೃತ, ಬಿಎಂಸಿ ಕಲ್ಚರ್, ಮಜ್ಜಿಗೆ ದ್ರಾವಣವನ್ನು ಸಹ ನೀಡುತ್ತಾರೆ. ಸಸ್ಯಗಳಿಗೆ ರೋಗ ಬಾಧಿಸಿದರೆ ಈ ದ್ರಾವಣಗಳನ್ನು ಸಿಂಪಡಿಸುತ್ತಾರೆ. ಇವುಗಳನ್ನೆಲ್ಲಾ ರೂಪಾ ಸ್ವ ಆಸಕ್ತಿಯಿಂದ ತಿಳಿದುಕೊಂಡು ಕಲಿತು ಜಮೀನಿನಲ್ಲಿ ಪ್ರಯೋಗ ಮಾಡುತ್ತಿದ್ದಾರೆ.

ಇತರರಿಗೆ ಮಾದರಿ: ರೂಪಾ ಮತ್ತು ಮಹೇಶ್ ಕೃಷಿ ವಿಧಾನ ಇತರರಿಗೆ ಮಾದರಿಯಾಗಿದೆ. ಕಲ್ಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾವಯವ ವಿಧಾನದಲ್ಲಿ ಕೃಷಿ ಮಾಡುತ್ತಿರುವ ಹಲವು ರೈತರಿದ್ದಾರೆ. ಈ ರೈತರೊಂದಿಗೆ ಮಾದರಿ ಎನಿಸಿಕೊಂಡಿರುವ ರೂಪಾ ಮತ್ತು ಮಹೇಶ್ ಹೊಸದಾಗಿ ಕೃಷಿ ಆರಂಭಿಸುವ ಯುವಕರಿಗೆ, ಸಾವಯವ ಪದ್ಧತಿ ಅನುಸರಿಸಲು ಇಚ್ಛಿಸುವವರಿಗೆ ಪ್ರಾಯೋಗಿಕ ಅನುಭವ ನೀಡುತ್ತಾರೆ. ರೈತ ಮಹಿಳೆ ರೂಪಾ ತಮ್ಮಲ್ಲಿರುವ ಪ್ರಗತಿ ಪರ ಚಿಂತನೆಗಳನ್ನು ಕೃಷಿಯಲ್ಲೂ ಜಾರಿಗೆ ತಂದಿದ್ದಾರೆ. ರೈತರ ಕುಟುಂಬದಲ್ಲಿ ಇಂತಹ ಮಗಳು ಮನೆಗೊಬ್ಬಳಿದ್ದರೆ ಸಮಾಜಮುಖಿ ಚಿಂತನೆ ವಿಸ್ತಾರಗೊಳ್ಳುತ್ತದೆ. ವಿಷ ಮುಕ್ತ ಕೃಷಿ ಆರಂಭಗೊಳ್ಳುತ್ತದೆ.

ವಿಷ ಮುಕ್ತ ಆಹಾರ ಬೆಳೆಯಬೇಕೆಂಬ ಉದ್ದೇಶದಿಂದ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಸಾಂಪ್ರದಾಯಿಕ ವಿಧಾನ ಅನುಸರಿಸಿದರೆ ಮಹಿಳೆಯರೂ ಸಹ ಕೃಷಿಯನ್ನು ಮಾಡಬಹುದು. ನಾನು ನನ್ನ ಮಗಳನ್ನೂ ಸಹ ರೈತಳಾಗಬೇಕೆಂದೇ ಬಯಸುತ್ತೇನೆ. ನಾವು ಬೆಳೆಯುವ ಆಹಾರವನ್ನು ಮಾರಾಟ ಮಾಡಿ ನಾವೇ ಖರೀದಿಗೆ ನಿಲ್ಲುವ ಬದಲು ನಾವು ಬೆಳೆದ ಆಹಾರವನ್ನು ನಾವೇ ಸೇವಿಸುವಂತಾಗಬೇಕು. ರೂಪಾ, ರೈತ ಮಹಿಳೆ, ಕಲ್ಪುರ(ಗೋವಿಂದವಾಡಿ) ಸಾವಯವ ವಿಧಾನದ ಕೃಷಿ ನನಗಿಂತಲೂ ನನ್ನ ಪತ್ನಿಗೆ ಹೆಚ್ಚು ಆಸಕ್ತಿ ಇತ್ತು. ಅವರ ಒತ್ತಾಸೆಯ ಮೇರೆಗೆ 2 ವರ್ಷಗಳಿಂದ ಸಾವಯವ ಪದ್ಧತಿ ಅಳವಡಿಸಿಕೊಂಡಿದ್ದೇವೆ. ಇದರಲ್ಲಿ ಖರ್ಚು ಕಡಿಮೆ ಇದೆ. ನಿರ್ವಹಣೆ ಸುಲಭವಾಗಿದೆ. ಮುಖ್ಯವಾಗಿ ವಿಷ ಮುಕ್ತ ಆಹಾರವಾಗಿರುವ ಕಾರಣಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುವಂತಾಗಬೇಕು. ಮಹೇಶ್, ರೈತ, ಕಲ್ಪುರ(ಗೋವಿಂದವಾಡಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net