

ಚಿತ್ರದುರ್ಗ: ಪತಿ-ಪತ್ನಿಯರಲ್ಲಿ ಅನ್ಯೋನ್ಯತೆ ಇದ್ದರೆ, ಸಹಬಾಳ್ವೆಗೆ ಸಹಕಾರಿಯಾಗಲಿದೆ. ಆದ್ದರಿಂದ ಸಣ್ಣ-ಪುಟ್ಟ ವಿಚಾರಕ್ಕೆ ಜಗಳವಾಡದೆ, ಕಲಹಕ್ಕೆ ಹಾದಿ ಮಾಡಿಕೊಡಬೇಡಿ ಎಂದು ಶ್ರೀ ಡಾ. ಬಸವಕುಮಾರ ಸ್ವಾಮೀಜಿ ಸಲಹೆ ನೀಡಿದರು.
ಮುರುಘಾಮಠದಿಂದ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ಕಲ್ಯಾಣ ಮಹೋತ್ಸವ, ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ನವ ಜೋಡಿಗಳು ಆರಂಭದಿಂದ ಕೊನೆಯವರೆಗೂ ಪರಸ್ಪರ ಅರ್ಥ ಮಾಡಿಕೊಂಡು ಸುಂದರ ಬದುಕು ನಿರ್ಮಿಸಿಕೊಳ್ಳಬೇಕು. ದುಶ್ಚಟ, ದುರ್ಗುಣ ಮೈಗೂಡಿಸಿಕೊಳ್ಳದೆ, ಸದ್ಗುಣ, ಸನ್ನಡತೆಯಿಂದ ಬಾಳಬೇಕು ಎಂದರು.
ಸಾಮೂಹಿಕ ಬದ್ಧತೆ, ನಾಯಕತ್ವದಲ್ಲಿ ಮೌಲ್ಯಗಳು ಅಡಗಿವೆ. ಅದೇ ರೀತಿ ಸಾಲದ ಸುಳಿಗೆ ಸಿಲುಕದೆ, ದುಂದು ವೆಚ್ಚ ಮಾಡದೆಯೇ ನಡೆಯುವಂತ ಸಾಮೂಹಿಕ ವಿವಾಹ ಆದರ್ಶಕ್ಕೆ ನಾಂದಿಯಾಗಿದೆ ಎಂದು ಬಣ್ಣಿಸಿದರು.
ಶ್ರೀ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಬದುಕು ಸ್ವರ್ಗವಾಗಲು ಸತಿ-ಪತಿಗಳಿಬ್ಬರಲ್ಲೂ ಪ್ರೀತಿ, ವಿಶ್ವಾಸ, ನಂಬಿಕೆ ಇರಬೇಕು. ಆ ಮೂಲಕ ನೆಮ್ಮದಿ ಕಾಣಬೇಕು. ಅಸೂಯೆ, ದುರಾಸೆ ಜೀವನಕ್ಕೆ ಮಾರಕ ಎಂದರು.
ಪರಿಸರ ಇಡೀ ಮಾನವಕುಲಕ್ಕೆ ತಂದೆ-ತಾಯಿ ಇದ್ದಂತೆ. ಆದ್ದರಿಂದ ಪ್ರಕೃತಿಯನ್ನು ನಾವು ಕಾಪಾಡಿದರೆ ಅದು ನಮ್ಮ ಮುಂದಿನ ಪೀಳಿಗೆಗೆ ಶ್ರೀರಕ್ಷೆಯಾಗಲಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಗಿಡ-ಮರಗಳ ಪೋಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಶ್ರೀ ಬಸವನಾಗಿದೇವ ಸ್ವಾಮೀಜಿ ಮಾತನಾಡಿ, ನೋವು, ತೊಂದರೆ ಯಾರನ್ನೂ ಬಿಟ್ಟಿಲ್ಲ. ಆದ್ದರಿಂದ ಜೀವನ ಕ್ರಮ ಸರಿಯಾಗಿದ್ದರೆ, ಮೆಟ್ಟಿ ನಿಲ್ಲಬಹುದು ಎಂದು ಅಭಿಪ್ರಾಯಪಟ್ಟರು.
ಇದೇ ವೇಳೆ 10 ಜೋಡಿಗಳ ವಿವಾಹ ನೆರವೇರಿತು. 2008 ರಿಂದ ರಾಜ್ಯ, ಹೊರರಾಜ್ಯಗಳಲ್ಲಿ ಪ್ರತಿ ವರ್ಷ ನಾಗಲಿಂಗ ಪುಷ್ಪ ಸಸಿಗಳನ್ನು ಉಚಿತವಾಗಿ ವಿತರಿಸುತ್ತಿರುವ ಸಂತೇಬೆನ್ನೂರಿನ ಕಾಶಿ ವಿಶ್ವನಾಥ ಅವರನ್ನು ಸನ್ಮಾನಿಸಲಾಯಿತು.
ದಾಂಪತ್ಯಕ್ಕೆ ಕಾಲಿರಿಸಿದ ನೂತನ ವಧು-ವರರು ಪರಿಸರ ದಿನದ ಅಂಗವಾಗಿ ಮುರುಘಾಮಠದಲ್ಲಿ ಸಸಿಗಳನ್ನು ನೆಟ್ಟು ನೀರೆರಚಿದರು. ವೀರಭದ್ರಪ್ಪ, ಜ್ಞಾನಮೂರ್ತಿ ಇತರರಿದ್ದರು.