ಕೊಳ್ಳೇಗಾಲ: ಶ್ರೀ ಪತಂಜಲಿ ಯೋಗ ಸಮಿತಿ ಜನರಿಗೆ ಉಚಿತವಾಗಿ ಆರೋಗ್ಯ ನೀಡುತ್ತಿದೆ ಎಂದು ತುಮಕೂರು ಪ.ಯೋ.ಶಿ.ಸ. ಸಹಾಯಕ ಪ್ರಾಧ್ಯಾಪಕ ಹಾಗೂ ಸಂಶೋಧಕ ಜಿ.ಆರ್.ಭರತ್ ಕುಮಾರ್ ಹೇಳಿದರು.
ಪಟ್ಟಣದ ಶ್ರೀ ಯೋಗ ಮಂದಿರದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕೊಳ್ಳೇಗಾಲ ಶಾಖೆಯ 36ನೇ ವಾರ್ಷಿಕೋತ್ಸವ (ಸಮಿತಿ), 25ನೇ ವಾರ್ಷಿಕೋತ್ಸವ (ಯೋಗಮಂದಿರ) ಸಮಾರಂಭದಲ್ಲಿ ಮಾತನಾಡಿದರು. ಸುಮಾರು 40 ವರ್ಷಗಳ ಹಿಂದೆ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರಿನಲ್ಲಿ ಮೊಟ್ಟ ಮೊದಲ ಬಾರಿಗೆ ಆರಂಭವಾಯಿತು. ಇಂದು ದೇಶದಾದ್ಯಂತ 250 ಕಡೆಗಳಿಗೆ ಯೋಗ ಶಿಕ್ಷಣ ಸಮಿತಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಕಾರಕ್ಕೆ ಧಕ್ಕೆ ಆಗದಂತೆ ಜನರಿಗೆ ಯೋಗ, ಪ್ರಾಣಾಯಾಮ ಕಲೆಯನ್ನು ಕಲಿಸುವ ಮೂಲಕ ಉಚಿತವಾಗಿ ಆರೋಗ್ಯವನ್ನು ನೀಡುತ್ತಿದೆ ಎಂದರು.
ಮಾನಸ ಕಾಲೇಜು ಸಮೀಪದ ಸಂಜೀವಿನಿ ಆಯುರ್ವೇದ ಆಯುಷ್ ವೈದ್ಯಾಧಿಕಾರಿ ಡಾ.ಎಂ.ಸುಧಾ ಮಾತನಾಡಿ, ಮಾನವ ಆಹಾರ, ನೀರು, ನಿದ್ರೆ ಹಾಗೂ ವ್ಯಾಯಾಮಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯೋಗಾಭ್ಯಾಸ ಮಾನಸಿಕ ಹಾಗೂ ದೈಹಿಕ ಸಧೃಡತೆಗೆ ಸಹಕಾರಿಯಾಗಲಿದೆ ಎಂದರು.
ಇದಕ್ಕೂ ಮುನ್ನ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಯೋಗಾಸನ ಪ್ರದರ್ಶನ, ಮಾತೆಯರಿಂದ 1 ಲಕ್ಷ ಸೂರ್ಯ ನಮಸ್ಕಾರ ನಡೆಯಿತು. ಈ ವೇಳೆ ಗಣಪತಿ, ನವಗ್ರಹ, ಮೃತ್ಯುಜಯ ಹೋಮ ನೆರವೇರಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಪಿ.ಮಂಜುನಾಥ್, ಎಚ್.ಎಸ್. ಪಶುಪತಿ, ಟಿ.ಎನ್.ಆನಂದ ರಾಮಶೆಟ್ಟಿ, ಎಚ್.ಎಸ್. ನಟರಾಜನ್ ಇದ್ದರು.