

ಮುದಗಲ್: ಆರ್‌ಡಿಸಿಸಿ ಬ್ಯಾಂಕ್‌ನಿಂದ ಖಾತೆಗೆ ಹಣ ಜಮಾ ಮಾಡಿ ಬಳಿಕ ಅದನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಆದರೆ, ಈ ವಹಿವಾಟಿಗೆ ಸಂಬಂಧಿಸಿದಂತೆ ಸಾಲ ಮರುಪಾವತಿ ಮಾಡಿ ಎಂದು ನೋಟಿಸ್ ನೀಡಲಾಗಿದೆ ಎಂದು ಪಟ್ಟಣದ ಠಾಣೆಯಲ್ಲಿ ರೈತರು ಆರ್‌ಡಿಸಿಸಿ ಬ್ಯಾಂಕಿನ 14 ಸಿಬ್ಬಂದಿ ವಿರುದ್ಧ ಅ.30ರಂದು ಪ್ರಕರಣ ದಾಖಲಿಸಿದ್ದಾರೆ.
2017 ಮತ್ತು 2020 ನೇ ಸಾಲಿನಲ್ಲಿ ಆರ್‌ಡಿಸಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ನೀಲೋಗಲ್ ಗ್ರಾಮದ ಲಾಲಾಸಾಬ್ ಖಾತೆಗೆ 2,49,250 ರೂ., ಶರಣಬಸವ ಖಾತೆಗೆ 7,21,632 ರೂ., ಶರಣಪ್ಪ ಅವರ ಖಾತೆಗೆ 2,60,232 ರೂ., ಬಸವರಾಜ ಅವರ ಖಾತೆಗೆ 1.3 ಲಕ್ಷ ರೂ. ಜಮಾ ಆಗಿದ್ದು ಬಳಿಕ ಹಂತ ಹಂತವಾಗಿ ಬೇರೆ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ.
ಇದೀಗ ಈ ಹಣದ ವಹಿವಾಟಿಗೆ ಸಂಬಂಧಿಸಿದಂತೆ ಮಾಹಿತಿ ಹಾಗೂ ಸಾಲ ಮರು ಪಾವತಿಸುವಂತೆ ರೈತರಿಗೆ ಬ್ಯಾಂಕ್‌ನಿಂದ ನೋಟಿಸ್ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.