ಪಡುವಾರಹಳ್ಳಿ ಜಾತ್ರಾ ಸಂಭ್ರಮ

6
Published on

ಮೈಸೂರು: ಪಡುವಾರಹಳ್ಳಿಯಲ್ಲಿ ಜೋಡಿ ಮಾರಮ್ಮ ಜಾತ್ರೆ ಶ್ರದ್ಧಾ, ಭಕ್ತಿಯೊಂದಿಗೆ ಅದ್ದೂರಿಯಾಗಿ ಸೋಮವಾರ ನಡೆಯಿತು. ಸೋಮವಾರ ಬಾಯಿಗೆ ಬೀಗ ಹಾಕಿಕೊಂಡು ಭಕ್ತರು ಭಕ್ತಿಭಾವ ಮೆರದರು.


ಊರಿನ ಜನರೆಲ್ಲ ದೇವಿಯ ದರ್ಶನ ಪಡೆದರು. ಇಡೀ ಊರಿನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಕಾಲ ಬದಲಾದರೂ ಪಡುವಾರಹಳ್ಳಿ ಗ್ರಾಮಸ್ಥರು ಶತಮಾನಗಳಿಂದ ಅನುಸರಿಸಿಕೊಂಡು ಬಂದಿರುವ ಹಲವು ಕಟ್ಟುಪಾಡುಗಳನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ.


ಪಡುವಾರಹಳ್ಳಿ ಗ್ರಾಮಾಭ್ಯುದಯ ಟ್ರಸ್ಟ್ ವತಿಯಿಂದ ಶನಿವಾರದಿಂದ ಶುರುವಾಗಿರುವ ಜಾತ್ರೆ ಮಹೋತ್ಸವದಲ್ಲಿ ವಡ್ಡಬಾಯಿ ಆಚರಣೆ ನಡೆಯಿತು. 25 ಜೋಡಿ ನಾಡಕುಸ್ತಿ ಪಂದ್ಯಾವಳಿ, ಸುಗಮಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾನುವಾರ ಮಧ್ಯರಾತ್ರಿ ದೇವಸ್ಥಾನದ ಆವರಣದಿಂದ ತಂಪಿನ ಮೆರವಣಿಗೆ ಇಲ್ಲಿಯ ಪ್ರಮುಖ ಬೀದಿಗಳಲ್ಲಿ ಸಾಂಗವಾಗಿ ನೆರವೇರಿತ್ತು. ನೂರಾರು ಮಹಿಳೆಯರು ಪಾಲ್ಗೊಂಡು ದೇವಿಯನ್ನು ಆರಾಧಿಸಿದರು.


ಸೋಮವಾರ ಭಕ್ತರು ಬಾಯಿಗೆ ಬೀಗ ಹಾಕಿಕೊಂಡು ದೇವಿಯನ್ನು ಪ್ರಾರ್ಥಿಸಿದರು. ಬಳಿಕ ಮೆರವಣಿಗೆ ನಗರದ ಜರುಗಿತು.


ಮಕ್ಕಳಿಗೆ ‘ಅಮ್ಮ’ ಬಂದರೆ ದೇವಿಗೆ ಹರಕೆ ಹೊತ್ತು ಪೂಜೆ ಸಲ್ಲಿಸಿದರೆ ಬೇಗನೆ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ. ಕಟ್ಟುನಿಟ್ಟಿನ ವ್ರತದೊಂದಿಗೆ ಪೂಜೆ ಸಲ್ಲಿಸಿದರೆ ನಿಶ್ಚಿತವಾಗಿಯೂ ಮಕ್ಕಳು ಗುಣಮುಖರಾಗುತ್ತಾರೆ ಎಂಬುದು ಇಲ್ಲಿನ ಭಕ್ತರ ನಂಬಿಕೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net