ಪಡಿತರದಾರರಿಗೆ ತೊಂದರೆಯಾಗದಂತೆ ಕ್ರಮವಹಿಸಿ

oppo_2
ಮದ್ದೂರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಬಸವರಾಜು ಮಾತನಾಡಿದರು. ರಾಮಲಿಂಗಯ್ಯ, ಸುರೇಶ್, ಮಂಜುನಾಥ್ ಇದ್ದರು.
Published on

ಮದ್ದೂರು : ಪಡಿತರದಾರರಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಸವರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ 246 ಅರ್ಜಿಗಳು ಐಟಿ, ಜಿಎಸ್‌ಟಿಯಿಂದಾಗಿ ತೊಂದರೆಯಾಗುತ್ತಿದೆ. ಈ ಬಗ್ಗೆ ಅರ್ಜಿದಾರರನ್ನು ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸಿಡಿಪಿಒ ನಾರಾಯಣ್‌ಗೆ ಸೂಚನೆ ನೀಡಿದರು.

ತಾಲೂಕಿನ ವಳೆಗೆರೆಹಳ್ಳಿಯ ನಿವಾಸಿ ಸಾವಿತ್ರಮ್ಮ ಮಾತನಾಡಿ, ನನಗೆ 1 ತಿಂಗಳೂ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಹಣ ಬಂದಿಲ್ಲ. ಈ ಬಗ್ಗೆ ಗಮನಹರಿಸಿ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು. ಅನ್ನಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಸರಿಯಾಗಿ ವಿತರಣೆ ಮಾಡುತ್ತಿಲ್ಲ, ಅಷ್ಟೇ ಅಲ್ಲದೆ ಪಡಿತರ ವಿತರಣೆದಾರರು ಪಡಿತರ ನೀಡಲು ಸಾರ್ವಜನಿಕರಿಂದ ಪ್ರತಿಯೊಂದು ಕಾರ್ಡಿಗೂ 10 ರೂ. ಗಳನ್ನು ಪಡೆಯುತ್ತಿದ್ದಾರೆ, ಪಡಿತರದಾರರಿಗೆ ಅನುಕೂಲವಾಗುವಂತೆ ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ವಿತರಣೆ ಮಾಡುವಂತೆ ಅಗತ್ಯ ಕೈಗೊಳ್ಳಬೇಕು ಎಂದು ಸಮಿತಿಯ ಸದಸ್ಯ ಭಾನುಪ್ರಕಾಶ್, ಫೈರೋಜ್ ಇತರ ಸದಸ್ಯರು ಒತ್ತಾಯಿಸಿದರು.

ಅಧ್ಯಕ್ಷ ಬಸವರಾಜು ಮಾತನಾಡಿ, ಪಡಿತರದಾರರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಹಾರ ಶಿರಸ್ತೇದಾರ್ ಜ್ಯೋತಿ ಅವರಿಗೆ ಎಚ್ಚರಿಕೆ ನೀಡಿದರು.

ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 80,180 ಫಲಾನುಭವಿಗಳಿಗೆ 16.40 ಕೋಟಿ ರೂ. ಗಳನ್ನು ಮಾಸಿಕವಾಗಿ ಸರ್ಕಾರ ಭರಿಸುತ್ತಿದೆ ಎಂದು ತಾಪಂ ಇಒ ರಾಮಲಿಂಗಯ್ಯ ಸಭೆಗೆ ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರತಿ ದಿನ 70 ಸಾವಿರ ಮಹಿಳೆಯರು ತಾಲೂಕು ವ್ಯಾಪ್ತಿಯಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಘಟಕ ದ ವ್ಯವಸ್ಥಾಪಕ ನಟರಾಜು ಮಾಹಿತಿ ನೀಡಿದರು. ಈ ವೇಳೆ ನವಿಲೆ ಸೇರಿದಂತೆ ಹಲವು ಕಡೆಗಳಲ್ಲಿ ಶಾಲಾ- ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್‌ಗಳನ್ನು ಹಾಕಬೇಕು ಎಂದು ಸಮಿತಿಯ ಸದಸ್ಯರು ಆಗ್ರಹಿಸಿದರು.

ತಾಲೂಕು ವ್ಯಾಪ್ತಿಯಲ್ಲಿ 81,750 ಕುಟುಂಬಗಳು ಗೃಹಜ್ಯೋತಿ ಯೋಜನೆಯಡಿ ಅನುಕೂಲ ಪಡೆಯುತ್ತಿದ್ದಾರೆ ಎಂದು ಸೆಸ್ಕ್ ಅಧಿಕಾರಿ ಮೋಹನ್ ಸಭೆಗೆ ಮಾಹಿತಿ ನೀಡಿದರು.

ತಾಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ, ನರೇಗಾ ಸಹಾಯಕ ನಿರ್ದೇಶಕ ಮಂಜುನಾಥ್, ತಾಲೂಕು ಯೋಜನಾಧಿಕಾರಿ ಸುರೇಶ್ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net