ಪಡಿತರದಲ್ಲಿ ಅಕ್ಕಿ ಕಡಿತಕ್ಕೆ ಖಂಡನೆ; ಎಸ್‌ಯುಸಿಐ ಪಕ್ಷದಿಂದ ಪ್ರತಿಭಟನೆ

12
Published on

ಪಡಿತರದಲ್ಲಿ ಅಕ್ಕಿ ಕಡಿತಕ್ಕೆ ಖಂಡನೆ
ವಿಜಯವಾಣಿ ಸುದ್ದಿಜಾಲ ಧಾರವಾಡ
ಪಡಿತರ ಚೀಟಿದಾರರಿಗೆ ವಿತರಣೆಯಾಗುತ್ತಿದ್ದ ಅಕ್ಕಿ ಪ್ರಮಾಣವನ್ನು ಕಡಿತಗೊಳಿಸಿರುವುದನ್ನು ಖಂಡಿಸಿ, ಅಕ್ಕಿ ಜೊತೆಗೆ ಗೋಧಿ, ಜೋಳ, ತೊಗರಿಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಸೀಮೆಎಣ್ಣೆ ವಿತರಿಸಲು ಆಗ್ರಹಿಸಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕಲಾಭವನ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗೆ ಮನವಿ ರವಾನಿಸಲಾಯಿತು.
ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತ ಬಡವರ ಹೊಟ್ಟೆಯ ಮೇಲೆ ಗಧಾಪ್ರಹಾರ ಮಾಡುತ್ತಿವೆ. ಕೇಂದ್ರ ಬಜೆಟ್‌ನಲ್ಲಿ ಆಹಾರಕ್ಕೆ ಕೊಡುವ ಸಬ್ಸಿಡಿಯಲ್ಲಿ 90,000 ಕೋಟಿ ರೂ. ಕಡಿತ ಮಾಡಿದೆ. ಮತ್ತೊಂದೆಡೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ಒದಗಿಸುವ ನರೇಗಾ ಯೋಜನೆಯಲ್ಲಿ 28,000 ಕೋಟಿ ರೂ. ಕಡಿತ ಮಾಡಿದೆ. ಜನಕಲ್ಯಾಣ ಯೋಜನೆಗಳನ್ನು ಕಡಿತಗೊಳಿಸಿದ್ದಲ್ಲದೆ, ಅಗತ್ಯ ವಸ್ತುಗಳ ಮೇಲೆ ವಿಪರೀತ ತೆರಿಗೆ ಹಾಕಿ ಬೆಲೆ ಏರಿಕೆ ಮಾಡಲಾಗಿದೆ. ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಕಾರ್ಯದರ್ಶಿ ಲಕ್ಷ್ಮ್ಮಣ ಜಡಗನ್ನವರ, ಸಮಿತಿ ಸದಸ್ಯರಾದ ಗಂಗಾಧರ ಬಡಿಗೇರ, ದೀಪಾ ಧಾರವಾಡ, ಭುವನಾ, ಶರಣು ಗೋನವಾರ, ಮಧುಲತಾ ಗೌಡರ, ಭವಾನಿಶಂಕರ್ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ನಗರದ ವಿವಿಧ ಕೊಳಗೇರಿಗಳು, ಬಡಾವಣೆಗಳು ಹಾಗೂ ಜಿಲ್ಲೆಯ ವಿವಿಧ ಗ್ರಾಮಗಳ ಬಡಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net