ಪಡಿತರ ವಿತರಣೆಯಲ್ಲಿ ಲೋಪವಾಗದಿರಲಿ

IMG20230124121046
ಮಂಚದೇವನಹಳ್ಳಿ ಗ್ರಾಮದಲ್ಲಿ ತೆರೆಯಲಾದ ಪಡಿತರ ಉಪ ಕೇಂದ್ರದಲ್ಲಿ ಶಾಸಕ ಕೆ.ಮಹದೇವ್ ಪಡಿತರದಾರರಿಗೆ ಅಕ್ಕಿ ವಿತರಿಸಿದರು. ಅಣ್ಣಯ್ಯ ಶೆಟ್ಟಿ, ಸುರೇಶ್, ಸಣ್ಣಸ್ವಾಮಿ ಇದ್ದರು.
Published on

ಬೈಲಕುಪ್ಪೆ: ಪಡಿತರ ಪದಾರ್ಥಗಳ ವಿತರಣೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ಮಾಲೀಕರು ನೋಡಿಕೊಳ್ಳಬೇಕು ಎಂದು ಶಾಸಕ ಕೆ. ಮಹದೇವ್ ಸೂಚಿಸಿದರು.

ಬೈಲಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚದೇವನಹಳ್ಳಿ ಗ್ರಾಮದಲ್ಲಿ ಪಡಿತರ ಪದಾರ್ಥಗಳ ವಿತರಣೆ ಉಪಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಭಾಗದ ಜನರು ಪಡಿತರ ಪದಾರ್ಥಗಳನ್ನು ತೆಗೆದುಕೊಳ್ಳಲು ಸುಮಾರು 100 ರೂ. ಆಟೋ ಬಾಡಿಗೆ ನೀಡಿ ಬೈಲಕುಪ್ಪೆಗೆ ಬರಬೇಕಿತ್ತು. ಅಲ್ಲದೆ ಇದಕ್ಕಾಗಿ ಒಂದು ದಿನದ ಸಮಯ ವ್ಯರ್ಥವಾಗುತ್ತಿತ್ತು. ಇದನ್ನು ಅರಿತು ಸ್ಥಳೀಯವಾಗಿಯೇ ಜನರಿಗೆ ಪಡಿತರ ಸಿಗುವಂತೆ ಮಾಡಲು ಉಪಕೇಂದ್ರ ತೆರೆಯಲಾಗುತ್ತಿದೆ. ತಾಲೂಕಿನಾದ್ಯಂತ ಈಗಾಗಲೇ 51 ಪಡಿತರ ವಿತರಣೆಯ ಉಪ ಕೇಂದ್ರಗಳನ್ನು ತೆರೆದಿದ್ದು, ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ಪಡಿತರ ಪದಾರ್ಥಗಳು ಅರ್ಹ ಫಲಾನುಭವಿಗಳಿಗೆ ದೊರಕುವಂತೆ ಅಧಿಕಾರಿಗಳು ನಿಗಾ ವಹಿಸಬೇಕು ಇದರಲ್ಲಿ ಯಾವುದೇ ಲೋಪದೋಷ ಕಂಡುಬಂದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ ಮಾತನಾಡಿ, ಮಂಚದೇವನಹಳ್ಳಿ ಪಡಿತರ ಪದಾರ್ಥಗಳ ವಿತರಣೆಯ ಉಪಕೇಂದ್ರದಲ್ಲಿ 300ಕ್ಕೂ ಹೆಚ್ಚು ಪಡಿತರ ಕಾರ್ಡುಗಳನ್ನು ಹೊಂದಿರುವ ಅರ್ಹ ಫಲಾನುಭವಿಗಳಿದ್ದಾರೆ. ಇವರಿಗೆ ಅನುಕೂಲವಾಗುವ ರೀತಿಯಲ್ಲಿ ಪಡಿತರ ಪದಾರ್ಥಗಳನ್ನು ವಿತರಿಸಲು ಇಲಾಖೆಯೂ ಶ್ರಮಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಹಾರ ಇಲಾಖೆ ನಿರೀಕ್ಷಕ ಮಂಜುನಾಥ್, ತಾಲೂಕು ಜೆಡಿಎಸ್ ಅಧ್ಯಕ್ಷ ಅಣ್ಣಯ್ಯ ಶೆಟ್ಟಿ, ಗ್ರಾಮ ಪಂಚಾಯಿತಿ ಸದಸ್ಯ ಚೆಲುವರಾಜು, ಮುಖಂಡರಾದ ಸುರೇಶ್, ಕೆ. ವಿಜಯಕುಮಾರ್, ಸಿದ್ದನಾಯಕ, ಲಕ್ಷ್ಮಮ್ಮ, ಜಯಮ್ಮ, ನಾರಾಯಣ ನಾಯಕ, ವೆಂಕಟೇಶ್, ಚಂದ್ರು, ಬಸವರಾಜು, ಸುನಿಲ್, ಬೈಲಕುಪ್ಪೆ ಪಿಡಿಒ ಬೋರೇಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net