ಪಡಿತರ ಪಡೆಯಲು ಮೂಡದ ಬೆರಳಚ್ಚು

29sunti01 .
Published on

ಸುಂಟಿಕೊಪ್ಪ: ಪ್ರತಿ ತಿಂಗಳ ನ್ಯಾಯಬೆಲೆ ಅಂಗಡಿಯಿಂದ ಪಡಿತರ ಅಕ್ಕಿ ಪಡೆಯಲು ಈ ಹಿಂದೆ ಮೊಬೈಲ್ ಮೂಲಕ ಒಟಿಪಿ ಬಂದವರಿಗೆ ಪಡಿತರ ನೀಡಲಾಗುತ್ತಿತ್ತು. ಈ ವ್ಯವಸ್ಥೆಯಲ್ಲಿ ಲೋಪದೋಷಗಳು ಮತ್ತು ದುರುಪಯೋಗ ಕಂಡುಬಂದ ಹಿನ್ನೆಲೆಯಲ್ಲಿ ಪಡಿತರ ಚೀಟಿದಾರರೇ ನ್ಯಾಯಬೆಲೆ ಅಂಗಡಿಗೆ ಬಂದು ಗಣಕ ಯಂತ್ರದ ಮೂಲಕ ಹೆಬ್ಬೆಟ್ಟು ಗುರುತು ನೀಡಬೇಕಾಗಿದೆ. ಆದರೆ ಈ ವ್ಯವಸ್ಥೆಯಿಂದ ಪಡಿತರ ಚೀಟಿದಾರರು ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ.

ಒಟಿಪಿ ವ್ಯವಸ್ಥೆಯಲ್ಲಿ ಅಕ್ರಮಗಳನ್ನು ತಡೆಯುವಲ್ಲಿ ಯಶಸ್ವಿಯಾದರೆ ಥಂಬ್ ನೀಡುವ ವ್ಯವಸ್ಥೆಯಲ್ಲಿ ಪಡಿತರ ಚೀಟಿದಾರರಿಗೆ ಬೆರಳಿನ ಗುರುತು ವ್ಯವಸ್ಥೆಯಲ್ಲಿ ವಯಸ್ಕರಿಗೆ ಬೆರಳಚ್ಚು ಗುರುತು ಸರಿಯಾಗಿ ಬೀಳದ ಕಾರಣ ಪಡಿತರದಿಂದ ವಂಚಿತರಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಇದು ಪಡಿತರ ಚೀಟಿದಾರರಲ್ಲಿ ಆಕ್ರೋಶ ಹುಟ್ಟುಹಾಕಿದೆ.

ಸಾಮಾನ್ಯವಾಗಿ ತಿಂಗಳಿಗೊಮ್ಮೆ ಪಡಿತರ ಪಡೆಯಬೇಕಾಗಿದ್ದು 65ರಿಂದ 90 ಮೇಲ್ಪಟ್ಟ ಪಡಿತರ ಚೀಟಿದಾರರು ತಮ್ಮ ಸಹಾಯಕರೊಂದಿಗೆ ನ್ಯಾಯಬೆಲೆ ಅಂಗಡಿಗೆ ಬೆರಳಚ್ಚು ಕೊಡಲು ಹರಸಾಹಸ ಪಡಬೇಕಾಗಿದೆ. ಏಕೆಂದರೆ ಗಣಕ ಯಂತ್ರದಲ್ಲಿ ಅವರ ಬೆರಳಚ್ಚು ಸಹಿ ದಾಖಲಾಗುತ್ತಿಲ್ಲ, ನ್ಯಾಯಬೆಲೆ ಅಂಗಡಿಯವರು ಕೂಡ ಈ ವಿಷಯದಲ್ಲಿ ಅಸಹಾಯಕರಾಗಿದ್ದು, ಸರ್ಕಾರದ ನಿಯಮದಂತೆ ಆನ್‌ಲೈನ್‌ನಲ್ಲಿ ಬೆರಳಚ್ಚು ಸಹಿ ದಾಖಲಾದರೆ ಮಾತ್ರ ಪಡಿತರ ಅಕ್ಕಿ ಪಡೆಯಲು ಸಾಧ್ಯ, ಇದರಿಂದಾಗಿ ಪಡಿತರ ಅಕ್ಕಿಯನ್ನು ಅವಲಂಬಿಸಿರುವ ಹಿರಿಯ ಜೀವಿಗಳು ತೊಂದರೆಗೀಡಾಗಿದ್ದಾರೆ.

ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅದೆಷ್ಟೋ ಹಿರಿಯ ಜೀವಿಗಳು ನೆಲೆಸಿದ್ದು, ಅವರಿಗೆ ಸರ್ಕಾರದಿಂದ ಪಡಿತರ ಚೀಟಿಯನ್ನು ನೀಡಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಭಾರಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಇದರಲ್ಲಿ ಒಟಿಪಿ ಪದ್ಧತಿಯನ್ನು ರದ್ದುಗೊಳಿಸಿ. ಗಣಕ ಯಂತ್ರದ ಮೂಲಕ ಬೆರಳಚ್ಚು ನೀಡುವ ನಿಯಮ ಜಾರಿಗೆ ತರಲಾಗಿದೆ. ಇದರಿಂದ ಸಂಕಷ್ಟಕ್ಕೆ ತುತ್ತಾಗಿದ್ದು 65ರಿಂದ ಮೇಲ್ಪಟ್ಟ ಕೆಲವು ಮಂದಿಯ ಬೆರಳಚ್ಚು ಬೀಳದ ಹಿನ್ನೆಲೆಯಲ್ಲಿ ತಮ್ಮ ಪಡಿತರ ದೊರೆಯದೆ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಯೊಂದಿಗೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಸಂಬಂಧಪಟ್ಟವರು ಇದಕ್ಕೆ ಬದಲಿ ವ್ಯವಸ್ಥೆ ಹಿರಿಯ ಜೀವಿಗಳಿಗೆ ಅವಲಂಬಿತ ಪಡಿತರ ಅಕ್ಕಿ ದೊರೆಯುವಂತಾಗಬೇಕೆಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‌ಕುಮಾರ್ ಆಗ್ರಹಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿರುವ ನೆಲೆಸಿರುವ ಹಿರಿಯರು ಪಡಿತರ ಅಕ್ಕಿಯನ್ನೇ ಅವಲಂಬಿತರಾಗಿದ್ದು, ಅವರಿಗೆ ರಾಜ್ಯ ಸರ್ಕಾರದ ಹೊಸ ನಿಯಮದಿಂದ ಹಿರಿಯ ಜೀವಿಗಳು ಆಧಾರ್ ಸೆಂಟರ್‌ಗಳಿಗೆ ತೆರಳಿ ತಮ್ಮ ಬೆರಳಚ್ಚು ಪರಿಶೀಲಿಸಲಾಗಿದ್ದರೂ ಬೆರಳಚ್ಚು ಸರಿಹೊಂದದೆ ಪಡಿತರದಿಂದ ಅದೆಷ್ಟೋ ಹಿರಿಯ ಜೀವಿಗಳು ವಂಚಿಗೊಳ್ಳುತ್ತಿದ್ದಾರೆ. ಸರ್ಕಾರ ಹಿರಿಯ ಜೀವಿಗಳ ಸಮಸ್ಯೆ ಗಂಭೀರತೆಯನ್ನು ಅರಿತು ಅವರಿಗೆ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಡುವಂತೆ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂದೋಡಿ ಜಗನ್ನಾಥ್ ಆಗ್ರಹಿಸಿದ್ದಾರೆ.

ಬೆರಳಚ್ಚು ಮೂಡದ ಕಾರಣ ಹಿರಿಯಜೀವಿಗಳು ಪಡಿತರ ಸೌಲಭ್ಯದಿಂದ ವಂಚಿತರಾಗುತ್ತಿರುವುದಲ್ಲದೆ, ನ್ಯಾಯಬೆಲೆ ಅಂಗಡಿಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಹಿರಿಯ ಜೀವಿಗಳಿಂದ ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.

ಕೆ.ಎಸ್.ಮಂಜುನಾಥ್, ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net