

ಗೊಳಸಂಗಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ಕಳೆದೆರಡು ತಿಂಗಳಿನಿಂದ ಬೆನ್ನು ಹತ್ತಿದ ಜನತೆಯ ಪರದಾಟ ಇಂದಿಗೂ ಮುಗಿಯದ ಕಥೆಯಾಗಿ ರಾರಾಜಿಸುತ್ತಿದೆ.
ಗೃಹಲಕ್ಷ್ಮೀ ಯೋಜನೆಯ ಲಾಭ ಪಡೆಯಲು ಪಡಿತರ ಚೀಟಿಯಲ್ಲಿ ಕುಟುಂಬದ ಮಹಿಳೆ ಯಜಮಾನಿ ಎಂದಿರಬೇಕು. ಇನ್ನು ಪರಿವಾರದ ಸದಸ್ಯರು ಅನ್ನಭಾಗ್ಯ ಯೋಜನೆಯ ಅಕ್ಕಿ ಅಥವಾ ಹಣ ಪಡೆಯಲು ಪ್ರತಿಯೊಬ್ಬರ ಇ-ಕೆವೈಸಿ ಆಗಿರಲೇಬೇಕು ಎಂಬುದು ಸರ್ಕಾರದ ನಿಯಮ.
ಸಿದ್ದು-ಡಿಕೆಸಿ ನೂತನ ಸರ್ಕಾರದ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಲೇಬೇಕೆಂದು ಹಟಕ್ಕೆ ಬಿದ್ದಿರುವ ಮಹಿಳೆಯರು ದೈನಂದಿನ 200-500 ರೂ., ದಿನಗೂಲಿ ಸಂಬಳವನ್ನೂ ಲೆಕ್ಕಿಸದೇ ವಿವಿಧ ನೋಂದಣಿ, ತಿದ್ದುಪಡಿ, ಸೇರ್ಪಡೆ, ನವೀಕರಣ ಹೀಗೆ ಬಗೆಬಗೆಯ ದಾಖಲಾತಿಗಾಗಿ ಬಾಪೂಜಿ ಸೇವಾಕೇಂದ್ರ, ಗ್ರಾಮ ಒನ್ ಕೇಂದ್ರಗಳಿಗೆ ಕಳೆದೆರಡು ತಿಂಗಳಿನಿಂದ ಪರದಾಡುವ ದೃಶ್ಯ ಸಾಮಾನ್ಯ ಎನ್ನುವಂತಾಗಿದೆ.
ಈಗಾಗಲೇ ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸಲು ಹೆಣಗಾಡಿ ಹೈರಾಣಾದ ಜನತೆಗೆ ಶುಕ್ರವಾರವಷ್ಟೇ ಆರಂಭಗೊಂಡ ಪಡಿತರ ಚೀಟಿ ತಿದ್ದುಪಡಿ ಕಾರ್ಯ ಬಾಯಾರಿದ ವ್ಯಕ್ತಿಯ ದಾಹ ತಣಿಸುವ ದಿವ್ಯ ಚೇತನವಾಗಿ ಕಂಡಿದೆ. ತಿದ್ದುಪಡಿ ಇಲ್ಲದೇ ಯೋಜನೆಯ ಲಾಭದಿಂದ ವಂಚಿತಗೊಳ್ಳುವ ಆತಂಕ ದೂರವಾಗುವ ಆಶಾಭಾವನೆ ಮೈಮನ ತುಂಬಿದೆ.
ಆದರೆ, ಪಡಿತರ ಚೀಟಿ ತಿದ್ದುಪಡಿಗೆ ಪ್ರತಿದಿನ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಮಾತ್ರ ಕಾಲಾವಕಾಶ ನೀಡಿರುವುದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಗೊಳಸಂಗಿ ಗ್ರಾಮವೊಂದರಲ್ಲೇ ಪ್ರಸ್ತುತ 173 ಅಂತ್ಯೋದಯ, 1,481 ಬಿಪಿಎಲ್ ಸೇರಿ 1,654 ಕುಟುಂಬಗಳು ಗ್ಯಾರಂಟಿ ಭಾಗ್ಯಗಳನ್ನು ಪಡೆಯಲು ಅರ್ಹತೆ ಹೊಂದಿವೆ. ಈ ಪೈಕಿ ಸುಮಾರು 3ಸಾವಿರ ಕ್ಕೂ ಅಧಿಕ ಜನ ಇ-ಕೆವೈಸಿ ಮಾಡಿಸದ ಪರಿಣಾಮ ಪಡಿತರ ಚೀಟಿಯಿಂದ ಹೊರಗುಳಿಯುವಂತಾಗಿದೆ. ಅದೆಲ್ಲದರ ತಿದ್ದುಪಡಿಗೆ ಸರ್ಕಾರ ನಿಗದಿ ಮಾಡಿದ ದಿನದ ಕೇವಲ 4 ತಾಸು ಕಾಲಾವಧಿ ಯಾತಕ್ಕೂ ಸಾಲದು ಎಂಬಂತಾಗಿದೆ. ಸಾಲಕ್ಕದ್ದೆ ಸರ್ವರ್ ಸಮಸ್ಯೆ ಎಂಬುದು ಬೆನ್ನು ಬಿಡದ ಬೇತಾಳನಂತೆ ಕಾಡತೊಡಗಿರುವುದು ಗಾಯದ ಮೇಲೆ ಬರೆ ಎಳೆದ ಅನುಭವವಾಗುತ್ತಿರುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ.
ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ಇದ್ದ ಕೆಲಸ ಬಿಟ್ಟು ಅದೆಷ್ಟೋ ದಿನ ಅಲೆದಾಡಿದ್ದೇವೆ. ಪಡಿತರ ಚೀಟಿ ತಿದ್ದುಪಡಿ ಕಾರ್ಯ ಶುಕ್ರವಾರದಿಂದ ಮಾತ್ರ ಆರಂಭಗೊಂಡಿದೆ. ಆದರೆ, ಸರ್ವರ್ ಸಮಸ್ಯೆ ಎಂಬುದು ಯಥಾಪ್ರಕಾರವಾಗಿದ್ದು ತಿದ್ದುಪಡಿಗೆ ತೀವೃ ಹಿನ್ನೆಡೆಯಾಗುತ್ತಿದೆ. ಶಾಂತಾ ಚಿನಿವಾರ, ಮಾದರಿ ಬಡಾವಣೆ ನಿವಾಸಿ ಗೊಳಸಂಗಿ.
ಪ್ರಸ್ತುತ ನಿಡಗುಂದಿ ತಾಲೂಕಿನಲ್ಲಿ ಹಳೆ ಅರ್ಜಿದಾರರ ಪೈಕಿ 176 ಪಡಿತರ ಚೀಟಿಯ ಕುಟುಂಬಸ್ಥರು ಮಾತ್ರ ತಿದ್ದುಪಡಿಯಾಗಬೇಕಿದೆ. ಇನ್ನು ಹೊಸ ಅರ್ಜಿದಾರರ ತಿದ್ದುಪಡಿ ಅಂಕಿ-ಅಂಶ ಹೆಚ್ಚಾಗುವ ಸಾಧ್ಯತೆ ಇದೆ. ಸಧ್ಯ ಆ.21 ರವರೆಗೆ ಪಡಿತರ ಚೀಟಿ ತಿದ್ದುಪಡಿಗೆ ಸರ್ಕಾರ ಕಾಲಾವಕಾಶ ನೀಡಿದೆ. ಈ ಅವಧಿ ಇನ್ನೂ ಮುಂದುವರೆಯಲೂಬಹುದು. ಇಲ್ಲದೆಯೂ ಇರಬಹುದು. ಮಾರುತಿ ಹೊಟಗಾರ, ಫುಡ್ ಇನ್ಸಪೆಕ್ಟರ್ ನಿಡಗುಂದಿ.