

ಶಿರಹಟ್ಟಿ: ಪಟ್ಟಣದ ಜನತಾ ಬಜಾರ್ ನ್ಯಾಯಬೆಲೆ ಅಂಗಡಿಗೆ ಕಳಪೆ ಅಕ್ಕಿ ಪೂರೈಕೆಯಾಗಿದ್ದನ್ನು ಖಂಡಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ನ್ಯಾಯಬೆಲೆ ಅಂಗಡಿಗೆ ಪೂರೈಕೆಯಾಗಿದ್ದ ಅಕ್ಕಿ ಚೀಲಗಳನ್ನು ಲಾರಿಯಿಂದ ಇಳಿಸುವ ವೇಳೆ ಚೀಲ ಕೈಜಾರಿ ಬಿದ್ದು ಹರಿದಿದೆ. ಇದರಿಂದ ಅಕ್ಕಿ ಚೆಲ್ಲಾಪಿಲ್ಲಿಯಾಗಿ ನೆಲಕ್ಕೆ ಬಿದ್ದಿದೆ. ಅದರಲ್ಲಿ ಹಕ್ಕಿ ಪುಚ್ಚ, ಕಲ್ಲು, ಪ್ಲಾಸ್ಟಿಕ್ ಬಾಟಲಿ ಕ್ಯಾಪ್ ಇತ್ಯಾದಿ ತ್ಯಾಜ್ಯವಸ್ತುಗಳು ಕಂಡು ಬಂದವು. ಇಲ್ಲವಾದರೆ ಜನರಿಗೆ ಇಂಥ ಅಕ್ಕಿ ಹಂಚುತ್ತಿದ್ದರು ಎಂದು ಹಮಾಲರಾದ ಮುತ್ತಪ್ಪ ಮಾಗಡಿ, ಫಕೀರೇಶ ಬಾರಕೇರ, ಭರಮಪ್ಪ ಗೂಳಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತು ಪ್ರತಿಕ್ರಿಯಿಸಿದ ವ್ಯವಸ್ಥಾಪಕ ಕೃಷ್ಣ ಮರಾಠೆ, ಪ್ರತಿ ತಿಂಗಳು ಕೇಂದ್ರ ಉಗ್ರಾಣ ನಿಗಮ ಗದಗಿನಿಂದ ಲಕ್ಷ್ಮೇಶ್ವರ ಉಗ್ರಾಣದಲ್ಲಿ ದಾಸ್ತಾನು ಆದ ಮೇಲೆ ಅಲ್ಲಿಂದ ನಮಗೆ ಪೂರೈಕೆಯಾಗುತ್ತದೆ. ಅದರಂತೆ ಶುಕ್ರವಾರ 230 ಕ್ವಿಂಟಾಲ್ ಅಕ್ಕಿ ಕಳುಹಿಸಲಾಗಿದೆ. ಈಗಾಗಲೇ ಕೆಲವೊಂದಿಷ್ಟು ಚೀಲಗಳನ್ನು ಇಳಿಸಿದ್ದು ಹಮಾಲರ ಕೈಯಿಂದ ಜಾರಿಬಿದ್ದು ಹರಿದ ಚೀಲದಿಂದ ಕಳಪೆ ಅಕ್ಕಿ ಕಂಡು ಬಂದಿದೆ ಎಂದರು. ಹಾಗಾದರೆ ಈಗಾಗಲೇ ಇಳಿಸಿದ ಚೀಲಗಳನ್ನು ತೆರೆದು ನೋಡಿ ಎಂದು ಪಡಿತರದಾರರು ಆಗ್ರಹಿಸಿದರು.
ಆಗ ಮತ್ತೊಂದು ಚೀಲ ಬಿಚ್ಚಿ ನೋಡಿದಾಗ ಅದರಲ್ಲಿಯೂ ಕಳಪೆ ಅಕ್ಕಿ ಕಂಡು ಬಂದಿದೆ. ತಕ್ಷಣವೇ ವ್ಯವಸ್ಥಾಪಕ ಮರಾಠೆ ಈ ಬಗ್ಗೆ ಆಹಾರ ಶಿರಸ್ತೇದಾರರ ಗಮನಕ್ಕೆ ತಂದರು. ಗುಣಮಟ್ಟದ ಅಕ್ಕಿ ಚೀಲ ಇಟ್ಟುಕೊಂಡು ಕಳಪೆ ಚೀಲಗಳನ್ನೆಲ್ಲ ಕಳುಹಿಸಿ ಎಂದು ಸೂಚನೆ ನೀಡಿದರು. ಇದರಿಂದ ಅಸಮಾಧಾನಗೊಂಡ ಗ್ರಾಹಕರು, ಎಲ್ಲ ಚೀಲಗಳನ್ನು ಮರಳಿ ಕಳುಹಿಸಬೇಕು ಎಂದು ಪಟ್ಟು ಹಿಡಿದರು.
ಕೊನೆಗೆ ವ್ಯವಸ್ಥಾಪಕ ಮರಾಠೆ ಎಲ್ಲ ಚೀಲಗಳನ್ನು ಮರಳಿ ಉಗ್ರಾಣಕ್ಕೆ ಕಳುಹಿಸಿದರು.